ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಒಂದೆಡೆ ಸಚಿವ ಸಂಪುಟ ಪುನರ್ ರಚನೆ ಮತ್ತು ವಿಸ್ತರಣೆಯ ಲೆಕ್ಕಾಚಾರಗಳು ಜೋರಾಗಿದ್ದು, ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆಸುತ್ತಿದ್ದಾರೆ. ಆದರೆ, ಇಂತಹ ಸಮಯದಲ್ಲೇ ಮಾಜಿ ಸಚಿವ ಹಾಗೂ ಹಿರಿಯ ನಾಯಕ ಕೆ.ಎನ್. ರಾಜಣ್ಣ ಅವರು ತನಗೆ ಮಂತ್ರಿ ಸ್ಥಾನ ಬೇಡ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಎಲ್ಲೂ ಹೇಳಿಲ್ಲ, ಇನ್ನು ಮುಂದೆ ನನಗೆ ಕೊಟ್ಟರೂ ಆ ಸ್ಥಾನ ಬೇಡ, ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇದೇನೂ ವೈರಾಗ್ಯವಲ್ಲ, ರಾಜಕೀಯದಲ್ಲೇ ಇರುತ್ತೇನೆ!
ಮಂತ್ರಿ ಸ್ಥಾನ ನಿರಾಕರಿಸುತ್ತಿರುವ ಕುರಿತು ಮಾಧ್ಯಮಗಳೊಂದಿಗೆ ಮುಕ್ತವಾಗಿ ಮಾತನಾಡಿದ ರಾಜಣ್ಣ, ನಾನು ಮಂತ್ರಿಮಂಡಲದ ಆಕಾಂಕ್ಷಿ ಅನ್ನುವ ಮಾತನ್ನು ಎಲ್ಲೂ ಹೇಳಿಲ್ಲ, ಹಿಂದೆಯೂ ಹೇಳಿರಲಿಲ್ಲ. ಈಗ ಒಂದು ವೇಳೆ ಹೈಕಮಾಂಡ್ ತಂದುಕೊಟ್ಟರೂ ನನಗೆ ಅದು ಬೇಕಾಗಿಲ್ಲ. ಹಾಗಂತ ಇದರಲ್ಲಿ ಯಾವುದೇ ರೀತಿಯ ವೈರಾಗ್ಯ ಅಥವಾ ಸನ್ಯಾಸತ್ವದ ಪ್ರಶ್ನೆ ಇಲ್ಲ. ನಾವು ರಾಜಕೀಯದಲ್ಲಿ ಇರುವವರು, ರಾಜಕೀಯ ಬಿಟ್ಟು ಬೇರೇನೂ ಮಾಡುವುದಿಲ್ಲ. ಸಕ್ರಿಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ, ಎಂದರು.
ಎರಡು ವರ್ಷ ದಕ್ಷತೆಯಿಂದ ಕೆಲಸ ಮಾಡಿದ್ದೇನೆ, ಈಗ ಸಾಕು
ತಮ್ಮ ನಿರ್ಧಾರಕ್ಕೆ ಸೂಕ್ತ ಕಾರಣ ನೀಡಿದ ಅವರು, ಮಂತ್ರಿ ಕೆಲಸವನ್ನು ನಾನು ಈಗಾಗಲೇ ಎರಡು ವರ್ಷಗಳ ಕಾಲ ಮಾಡಿದ್ದೇನೆ. ಅತ್ಯಂತ ಪ್ರಾಮಾಣಿಕವಾಗಿ, ದಕ್ಷತೆಯಿಂದ ಮತ್ತು ಜನಪರವಾಗಿ ಕೆಲಸ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ. ಅದರಿಂದ ನನಗೆ ಅಷ್ಟೇ ಸಾಕು. ಒಬ್ಬ ವ್ಯಕ್ತಿ ಎಷ್ಟೇ ಬಾರಿ ಮಂತ್ರಿಯಾದರೂ, ಅಧಿಕಾರ ಮುಗಿದ ಮೇಲೆ ಮಾಜಿ ಮಂತ್ರಿ ಎಂಬ ಹೆಸರು ಬದಲಾಗುವುದಿಲ್ಲವಲ್ಲ? ನನಗೂ ಕೂಡ ಎಷ್ಟು ಸಾರಿ ಮಂತ್ರಿ ಆದರೂ ಕೊನೆಗೆ ಮಾಜಿ ಮಂತ್ರಿ ಎಂದೇ ಕರೆಯುತ್ತಾರೆ, ಎಂದು ಮಾರ್ಮಿಕವಾಗಿ ನುಡಿದರು.
ಮಂತ್ರಿ ಸ್ಥಾನವೇನು ಮಕ್ಕಳ ಮನೆ ಆಸ್ತಿನಾ?
ತಮ್ಮ ಈ ನಿರ್ಧಾರವನ್ನು ಕೆಲವರು ತ್ಯಾಗ ಎಂದು ಬಿಂಬಿಸುತ್ತಿರುವ ಕುರಿತು ಕೆ.ಎನ್. ರಾಜಣ್ಣ ಅವರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಕೌಂಟರ್ ನೀಡಿದ್ದಾರೆ. ಇದರಲ್ಲಿ ನಾನು ದೊಡ್ಡ ತ್ಯಾಗ ಮಾಡಿದ್ದೇನೆ ಎಂದು ಹೇಳಿಕೊಳ್ಳಲು ಇದೇನು ಮಕ್ಕಳ ಮನೆ ಆಸ್ತಿನಾ? ಸಚಿವ ಸ್ಥಾನವಾಗಲಿ ಅಥವಾ ಶಾಸಕ ಸ್ಥಾನವಾಗಲಿ, ಇವೆಲ್ಲವೂ ಜನರು ನಮಗೆ ಕೊಡುವ ಬಲಿಷ್ಠ ಅಧಿಕಾರಗಳು. ಆ ಜನಾದೇಶದಿಂದಲೇ ನಾನು ಶಾಸಕನಾಗಿ, ಮಂತ್ರಿಯಾಗಿ ಕೆಲಸ ಮಾಡಲು ಸಾಧ್ಯವಾಯಿತು. ಈಗ ನಮ್ಮ ಪಕ್ಷದಲ್ಲಿ ಸಾಕಷ್ಟು ಜನ ಸಮರ್ಥ ಶಾಸಕರಿದ್ದಾರೆ. ಆದ್ದರಿಂದ ನನ್ನಂತೆ ಬೇರೆಯವರಿಗೂ ಮಂತ್ರಿಯಾಗಲು ಒಂದು ಉತ್ತಮ ಅವಕಾಶ ಸಿಗಲಿ, ಹೈಕಮಾಂಡ್ ಬೇರೆಯವರನ್ನು ಮಂತ್ರಿ ಮಾಡಲಿ, ಎಂದು ಮುಕ್ತ ಮನಸ್ಸಿನಿಂದ ಆಶಿಸಿದರು.