ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದೇನಹಳ್ಳಿ ಸಮೀಪದ ಹೋಂ ಸ್ಟೇ ಒಂದರಲ್ಲಿ ಬೆಂಗಳೂರು ಮೂಲದ (Crime) ಯುವತಿಯೊಬ್ಬಳು ಶಂಕಾಸ್ಪದವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರನ್ನು ಸಾಯಿ ಸುರಭಿ ಎಂದು ಗುರುತಿಸಲಾಗಿದ್ದು, ಆಕೆಯ ಪ್ರಿಯಕರ ಎನ್ನಲಾದ ಕೇರಳ ಮೂಲದ ಕ್ಯಾಬ್ ಚಾಲಕ ಸಂಜೀತ್ ಅಲಿ ಅದೇ ಕೋಣೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲವ್ ಜಿಹಾದ್ ಆರೋಪ ಮಾಡಿದ ತಾಯಿ ಮಗಳ ನಿಗೂಢ ಸಾವಿನಿಂದ ಆಘಾತಕ್ಕೊಳಗಾಗಿರುವ ತಾಯಿ ಗೀತಾ ಅವರು ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, "ಇದು ವ್ಯವಸ್ಥಿತ ಲವ್ ಜಿಹಾದ್ ಕೊಲೆ" ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾಹಿತಿಗಳ ಪ್ರಕಾರ, ಬೆಂಗಳೂರಿನ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿಯಾದ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿಯ ಹೋಂ ಸ್ಟೇಗೆ ಬಂದು ರೂಮ್ ಪಡೆದಿದ್ದರು. ಸೋಮವಾರ ಚೆಕ್-ಔಟ್ ಸಮಯ ಮುಗಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡ ಸಿಬ್ಬಂದಿ ಬಾಗಿಲು ತೆರೆದು ನೋಡಿದ್ದಾರೆ. ಈ ವೇಳೆ ಯುವತಿಯ ಶವ ಪತ್ತೆಯಾಗಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಣೆಯಲ್ಲಿ ಯುವತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆಯಾದರೂ, ಆಕೆಯನ್ನು ತೂಗುಹಾಕಿದ್ದ ಹಗ್ಗ ಕತ್ತರಿಸಿದ ಸ್ಥತಿಯಲ್ಲಿ ಇತ್ತು. ಜೊತೆಗೆ ರೂಮ್‌ನಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ಇಬ್ಬರೂ ವಿಷ ಸೇವಿಸಿರುವ ಸಾಧ್ಯತೆಗಳನ್ನೂ ಪೊಲೀಸರು ತಳ್ಳಿಹಾಕುತ್ತಿಲ್ಲ. ಘಟನಾ ಸ್ಥಳದಲ್ಲಿ ಒಂದು ಡೈರಿ ಲಭ್ಯವಿದ್ದು, ಅದರಲ್ಲಿ ಹಲವು ಗೊಂದಲಮಯ ವಿಚಾರಗಳನ್ನು ಬರೆಯಲಾಗಿದೆ. ಅಸ್ವಸ್ಥನಾಗಿರುವ ಸಂಜೀತ್ ಅಲಿಗೆ ಸಂಪೂರ್ಣ ಪ್ರಜ್ಞೆ ಬಂದು ಆತನ ಹೇಳಿಕೆ ದಾಖಲಿಸಿಕೊಂಡ ನಂತರವಷ್ಟೇ ಇದು ಕೊಲೆಯೋ ಅಥವಾ ಪ್ರೇಮಿಗಳ ಆತ್ಮಹತ್ಯೆಯೋ ಎಂಬುದು ಸ್ಪಷ್ಟವಾಗಲಿದೆ ಎಂದು ಎಸ್‌ಪಿ ಕುಶಾಲ್ ಚೌಕ್ಸಿ ತಿಳಿಸಿದ್ದಾರೆ.
ನನ್ನ ಮಗಳನ್ನು ಸಂಚು ರೂಪಿಸಿ ಕೊಂದಿದ್ದಾನೆ ಮಗಳ ಸಾವಿಗೆ ಸಂಜೀತ್ ಅಲಿ ಕಾರಣ ಎಂದು ತಾಯಿ ಗೀತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಮಗಳು ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿದ್ದಾಗ ಈತನ ಪರಿಚಯವಾಗಿತ್ತು. ಪ್ರೀತಿಯ ಹೆಸರಿನಲ್ಲಿ ಆಕೆಗೆ ನಿರಂತರ ಕಿರುಕುಳ ನೀಡುತ್ತಿದ್ದ. ಆತನ ಕಾಟದಿಂದ ತಪ್ಪಿಸಲು ಬೇರೆ ಕಡೆ ಓದಿಸಿದರೂ ಅಲ್ಲಿಗೂ ಬೆನ್ನಟ್ಟಿಕೊಂಡು ಹೋಗಿ ಕಾಟ ಕೊಟ್ಟಿದ್ದ. ನನ್ನ ಮಗಳಿಗೆ ಮಾದಕ ವ್ಯಸನದ ದಾಸಿಯಾಗುವಂತೆ ಮಾಡಿದ್ದ. ನಾನು ಕಷ್ಟಪಟ್ಟು ಆಕೆಗೆ ಡಿ-ಅಡಿಕ್ಷನ್ ಸೆಂಟರ್‌ನಲ್ಲಿ ಚಿಕಿತ್ಸೆ ಕೊಡಿಸಿ ಗುಣಮುಖಳನ್ನಾಗಿ ಮಾಡಿದ್ದೆ" ಎಂದು ತಾಯಿ ಅಳಲು ತೋಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಮುದ್ದೇನಹಳ್ಳಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದ ಸುರಭಿ, ಶನಿವಾರದಂದು ತಾಯಿಗೆ 'ಸತ್ಸಂಗ ಇದೆ' ಎಂದು ಹೇಳಿ ಬಂದಿದ್ದಳು. ಆದರೆ ಸಂಜೀತ್ ಆಕೆಯನ್ನು ಮರಳು ಮಾಡಿ ಹೋಂ ಸ್ಟೇಗೆ ಕರೆದೊಯ್ದು ಸಂಚು ರೂಪಿಸಿ ಹತ್ಯೆ ಮಾಡಿದ್ದಾನೆ ಎಂದು ಪೋಷಕರು ದೂರಿದ್ದಾರೆ.
ಪೊಲೀಸ್ ನಿರ್ಲಕ್ಷ್ಯದ ಆರೋಪ ಮತ್ತು ಹಳೇ ಕೇಸ್ ಈ ಹಿಂದೆ ಸಂಜೀತ್ ಅಲಿ ವಿರುದ್ಧ ಕುಟುಂಬಸ್ಥರು ದೂರು ನೀಡಿದ್ದರೂ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಒಂದು ವೇಳೆ ಅಂದೇ ಪೊಲೀಸರು ಆತನ ವಿರುದ್ಧ ಕ್ರಮ ಜರುಗಿಸಿದ್ದರೆ ಇಂದು ಸುರಭಿ ಬದುಕಿರುತ್ತಿದ್ದಳು ಎಂದು ಆಕೆಯ ಮಾವ ಶಂಕರನಾರಾಯಣ ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವರ್ಷವೂ ಸುರಭಿ ದಿಢೀರನೆ ನಾಪತ್ತೆಯಾಗಿದ್ದಾಗ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಆಗ ಪೊಲೀಸರು ಆಕೆಯನ್ನು ಸ್ನೇಹಿತರ ಮನೆಯಿಂದ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದರು. ಸದ್ಯ ನಂದಿಗಿರಿಧಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.