2026-06-29 11:37:58

Darshan | ಬೇಲ್‌ ಕೊಡಿ ಸ್ವಾಮಿ.. ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್! | SNK

Darshan | ಬೇಲ್‌ ಕೊಡಿ ಸ್ವಾಮಿ.. ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್! | SNK

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಎದುರಾಗಿರುವ ವಿಚಾರಣೆಯ ವಿಳಂಬ ಗತಿಯನ್ನು ಪ್ರಸ್ತಾಪಿಸಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ನಟ ದರ್ಶನ್ ತೂಗುದೀಪ ಅವರು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಒಂದು ವರ್ಷದವರೆಗೂ ಹೊಸದಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸದಂತೆ ನ್ಯಾಯಾಲಯ ನೀಡಿರುವ ನಿರ್ಬಂಧದ ಆದೇಶವನ್ನು ಮಾರ್ಪಡಿಸಬೇಕು ಎಂದು ದಾಸ ಸುಪ್ರೀಂ ಕೋರ್ಟ್‌ಗೆ ವಿಶೇಷ ಮನವಿ ಸಲ್ಲಿಸಿದ್ದಾರೆ.

ಒಂದು ವರ್ಷದ ಗಡುವು ಸಂಪೂರ್ಣ ನಿರ್ಬಂಧವಾಗದಿರಲಿ!

ಕಳೆದ ಮೇ 15ರಂದು ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸುವಾಗ, ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಾಣದಿದ್ದರೆ ಒಂದು ವರ್ಷದ ನಂತರ ಮತ್ತೆ ಜಾಮೀನಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಬಹುದು ಎಂದು ಆದೇಶಿಸಿತ್ತು. ಪ್ರಸ್ತುತ ಈ ಆದೇಶ ಪ್ರಕಟವಾದ ಕೆಲವೇ ವಾರಗಳಲ್ಲಿ ನಟ ದರ್ಶನ್ ಕೋರ್ಟ್‌ಗೆ ಸ್ಪಷ್ಟೀಕರಣ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಹೊಸ ಸಂದರ್ಭಗಳು ಅಥವಾ ಬೆಳವಣಿಗೆಗಳು ಕಂಡುಬಂದಲ್ಲಿ, ತಮ್ಮ ಹಿಂದಿನ ಆದೇಶವು ಜಾಮೀನು ಕೋರುವುದಕ್ಕೆ ಕಾನೂನಾತ್ಮಕ ತಡೆಯಾಗಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಬೇಕು ಎಂಬುವುದು ದರ್ಶನ್ ಅವರ ಮುಖ್ಯ ವಾದವಾಗಿದೆ. ಒಂದು ವರ್ಷದ ಕಾಲಮಿತಿಯನ್ನು ಹೊಸ ಸಂದರ್ಭಗಳನ್ನು ಪರಿಗಣಿಸದಂತೆ ತಡೆಯುವ ಸಂಪೂರ್ಣ ನಿರ್ಬಂಧ ಎಂದು ಪರಿಗಣಿಸಬಾರದು ಎಂದು ಅವರು ಕೋರಿದ್ದಾರೆ.

ವಿಚಾರಣೆ ತಡವಾದರೆ ಜೈಲೇ ಗತಿ ಒಂದು ವೇಳೆ ಪ್ರಧಾನ ವಿಚಾರಣೆ ಅತ್ಯಂತ ನಿಧಾನಗತಿಯಲ್ಲಿ ಸಾಗಿದರೆ, ತಾವು ದೀರ್ಘಕಾಲ ಜೈಲಿನಲ್ಲೇ ಇರಬೇಕಾಗುತ್ತದೆ. ಅಲ್ಲದೆ, ದೀರ್ಘ ಬಂಧನದಿಂದಾಗಿ ತಮ್ಮ ವೃತ್ತಿಜೀವನ, ಜೀವನೋಪಾಯ ಮತ್ತು ಕುಟುಂಬಕ್ಕೆ ಹಾನಿಯಾಗಿದೆ ಎಂದು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ತಮ್ಮ ತಾಯಿಯವರು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು, ಇಂತಹ ಪ್ರಮುಖ ಸಂದರ್ಭಗಳ ಸೃಷ್ಟಿಯಾದಾಗ ತಮಗೆ ಪರಿಹಾರ (ಜಾಮೀನು) ಕೋರಲು ಅವಕಾಶ ನೀಡಬೇಕು ಎಂದು ನಟ ಕೋರಿದ್ದಾರೆ. ಪ್ರಾಸಿಕ್ಯೂಷನ್ ಈ ಪ್ರಕರಣದಲ್ಲಿ ಒಟ್ಟು 262 ಸಾಕ್ಷಿಗಳನ್ನು ವಿಚಾರಣೆ ನಡೆಸಲು ಪಟ್ಟಿ ಸಿದ್ಧಪಡಿಸಿದೆ. ಮೇ 15ರ ಆದೇಶದಲ್ಲಿ ನ್ಯಾಯಾಲಯವು ತ್ವರಿತ ವಿಚಾರಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಪ್ರಮುಖ 60 ಸಾಕ್ಷಿಗಳನ್ನು ಆದಷ್ಟು ಬೇಗ ವಿಚಾರಣೆ ನಡೆಸಲು ಸೂಚಿಸಿತ್ತಾದರೂ, ಆ ನಂತರವೂ ಕೇವಲ ಇಬ್ಬರು ಸಾಕ್ಷಿಗಳನ್ನು ಮಾತ್ರ ವಿಚಾರಣೆ ಮಾಡಲಾಗಿದೆ ಎಂದು ದರ್ಶನ್ ಗಮನಸೆಳೆದಿದ್ದಾರೆ. ಇದರಿಂದಾಗಿ ವಿಚಾರಣೆ ಪೂರ್ಣಗೊಳ್ಳಲು ಹಲವು ವರ್ಷಗಳೇ ಬೇಕಾಗಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಏನು?

ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಅಪಹರಿಸಿ ಬೆಂಗಳೂರಿನ ಪಟ್ಟಣಗೆರೆ ಶೆಡ್‌ವೊಂದರಲ್ಲಿ ಕೊಲೆ ಮಾಡಿದ ಆರೋಪದ ಮೇಲೆ ದರ್ಶನ್ ಅವರನ್ನು ಜೂನ್ 11, 2024 ರಂದು ಪೊಲೀಸರು ಬಂಧಿಸಿದ್ದರು. ದರ್ಶನ್ ಆಪ್ತೆ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದೇ ಈ ಕೊಲೆಗೆ ಪ್ರಮುಖ ಕಾರಣ ಎಂದು ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಬಳಿಕ ಹೈಕೋರ್ಟ್‌ನಿಂದ ಜಾಮೀನು ಪಡೆದಿದ್ದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಜಾಮೀನನ್ನು ರಾಜ್ಯ ಸರ್ಕಾರದ ಮೇಲ್ಮನವಿ ಪುರಸ್ಕರಿಸಿ ಆಗಸ್ಟ್ 14, 2025 ರಂದು ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಅಂದಿನಿಂದಲೂ ಜೈಲುವಾಸ ಅನುಭವಿಸುತ್ತಿರುವ ದರ್ಶನ್, ನ್ಯಾಯಾಂಗ ಪ್ರಕ್ರಿಯೆಯ ಉದ್ದಕ್ಕೂ ತಾವು ಸಂಪೂರ್ಣವಾಗಿ ಸಹಕರಿಸಿದ್ದು, ವಿಚಾರಣೆಗೆ ಯಾವುದೇ ಅಡ್ಡಿಪಡಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ. ಸದ್ಯ ದರ್ಶನ್ ಸಲ್ಲಿಸಿರುವ ಈ ಹೊಸ ಅರ್ಜಿಯ ಮೇಲಿನ ಸುಪ್ರೀಂ ಕೋರ್ಟ್ ನಿಲುವು ಮತ್ತೊಮ್ಮೆ ಕುತೂಹಲ ಮೂಡಿಸಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.