2026-07-01 01:22:05

CJP | ಶ್ರೀಮಂತರಿಗೆ ಸೌಲಭ್ಯಗಳು ಜಾತಿ ಎಂದ ಜಿರಳೆ ಪಕ್ಷದ ಸಂಸ್ಥಾಪಕ - ನೀನು ಅಮೆರಿಕದಲ್ಲಿ ಓದಿದ್ದಲ್ವಾ ಗುರೂ ಎಂದ ನೆಟ್ಟಿಗರು! | SNK

CJP | ಶ್ರೀಮಂತರಿಗೆ ಸೌಲಭ್ಯಗಳು ಜಾತಿ ಎಂದ ಜಿರಳೆ ಪಕ್ಷದ ಸಂಸ್ಥಾಪಕ - ನೀನು ಅಮೆರಿಕದಲ್ಲಿ ಓದಿದ್ದಲ್ವಾ ಗುರೂ ಎಂದ ನೆಟ್ಟಿಗರು! | SNK

ನವದೆಹಲಿ : ಯೂಟ್ಯೂಬ್ ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ತೀವ್ರ ಸದ್ದು ಮಾಡುತ್ತಿರುವ ಸ್ಟ್ಯಾಂಡಪ್ ಕಾಮಿಡಿಯನ್ ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲೇಟೆಂಟ್' ಶೋ ಸದ್ಯ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸಮಯ್ ರೈನಾ ಮತ್ತು ಅವರ ಶೋ ಕುರಿತು ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ಕಾರಣವಾಗಿದೆ.  ಸಮಯ್ ರೈನಾ ಒಬ್ಬ 'ಪ್ರಿವಿಲೇಜ್ಡ್' (ಶ್ರೀಮಂತ ಪ್ರಭಾವಿ ಹಿನ್ನೆಲೆಯುಳ್ಳವರು) ಎಂದು ಅಭಿಜೀತ್ ದೀಪ್ಕೆ ಟೀಕಿಸಿದ್ದು, ಇದಕ್ಕೆ ಇಂಟರ್ನೆಟ್ ಲೋಕದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇತ್ತೀಚೆಗೆ ಖ್ಯಾತ ಸಂದರ್ಶನ ಕಾರ್ಯಕ್ರಮ 'ಅನ್‌ಫಿಲ್ಟರ್ಡ್ ಬೈ ಸಮ್ದೀಶ್'ನಲ್ಲಿ ಭಾಗವಹಿಸಿದ್ದ ಅಭಿಜೀತ್ ದೀಪ್ಕೆ ಅವರಿಗೆ, "ಒಂದು ವೇಳೆ ನಿಮ್ಮನ್ನು ಸಮಯ್ ರೈನಾ ಅವರ 'ಇಂಡಿಯಾಸ್ ಗಾಟ್ ಲೇಟೆಂಟ್' ಶೋಗೆ ಕರೆದರೆ ಹೋಗುತ್ತೀರಾ?" ಎಂಬ ಪ್ರಶ್ನೆ ಎದುರಾಗಿತ್ತು. ಇದಕ್ಕೆ ಯಾವುದೇ ಹಿಂಜರಿಕೆಯಿಲ್ಲದೆ ನೇರವಾಗಿ ನಿರಾಕರಿಸಿದ ಅಭಿಜೀತ್, "ನಾನು ಆ ಶೋಗೆ ಖಂಡಿತಾ ಹೋಗುವುದಿಲ್ಲ, ಏಕೆಂದರೆ ನನಗದು ಇಷ್ಟವಿಲ್ಲ. ಯಾವುದೇ ಹೋರಾಟ ಮಾಡದೆ, ಸುಲಭದ ದಾರಿ ಹಿಡಿದು ಹೊರಟುಹೋಗುವ ಮನಸ್ಥಿತಿ ನನಗಿಲ್ಲ. ನೀವು 'ಪ್ರಿವಿಲೇಜ್ಡ್' ಆಗಿರುವುದರಿಂದ ನಿಮಗೆ ಆ ರೀತಿ ಸುಲಭವಾಗಿ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ" ಎಂದು ಸಮಯ್ ರೈನಾ ಅವರ ಹೆಸರೇಳಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಅಭಿಜೀತ್ ದೀಪ್ಕೆ ಅವರ ಈ ಹೇಳಿಕೆಯ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇವರ ವಿರುದ್ಧ ಮುಗಿಬಿದ್ದಿದ್ದಾರೆ. ಬೇರೆಯವರನ್ನು 'ಪ್ರಿವಿಲೇಜ್ಡ್' ಎಂದು ಕರೆಯುವ ಅಭಿಜೀತ್ ದೀಪ್ಕೆ ಅವರ ಹಿನ್ನೆಲೆಯನ್ನು ಕೆದಕಿರುವ ಸೋಷಿಯಲ್ ಮೀಡಿಯಾ ಬಳಕೆದಾರರು, "ನೀವು ಅಮೆರಿಕದ ಬೋಸ್ಟನ್ ಯೂನಿವರ್ಸಿಟಿಯಲ್ಲಿ ಪಬ್ಲಿಕ್ ರಿಲೇಶನ್ಸ್ ವಿಷಯದಲ್ಲಿ ಸ್ನಾತಕೋತ್ತರ (ಮಾರ್ಸ್ಟರ್ಸ್) ಪದವಿ ಪಡೆದಿದ್ದೀರಿ. ಅಮೆರಿಕಕ್ಕೆ ಹೋಗಿ ಓದಿ ಬಂದಿರುವ ನೀವು ಪ್ರಿವಿಲೇಜ್ಡ್ ಅಲ್ವಾ?" ಎಂದು ಪ್ರಶ್ನಿಸುತ್ತಿದ್ದಾರೆ. "ಬೇರೆಯವರಿಗೆ ಬುದ್ಧಿ ಹೇಳುವ ಮುನ್ನ ನಿಮ್ಮ ಹಿನ್ನೆಲೆಯನ್ನು ಒಮ್ಮೆ ನೋಡಿಕೊಳ್ಳಿ, ಪ್ರತಿಯೊಬ್ಬರನ್ನೂ ಪ್ರಿವಿಲೇಜ್ಡ್ ಎಂದು ದೂಷಿಸುವ ಈ ನಾಟಕವನ್ನು ನಿಲ್ಲಿಸಿ" ಎಂದು ಕಮೆಂಟ್ ಬಾಕ್ಸ್‌ಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ಇತ್ತೀಚೆಗಷ್ಟೇ ಸಮಯ್ ರೈನಾ ತಮ್ಮ ಸ್ಟ್ಯಾಂಡಪ್ ಸ್ಪೆಷಲ್ 'ಸ್ಟಿಲ್ ಅಲೈವ್'ನಲ್ಲಿ ಈ ಹಿಂದೆ ಎದುರಿಸಿದ್ದ ಕಾನೂನು ಸಂಘರ್ಷಗಳ ಬಗ್ಗೆ ಮಾತನಾಡಿದ್ದರು. ಮುಂಬೈ ಪೊಲೀಸರು ತಮಗೆ ಜೈಲು ಶಿಕ್ಷೆಯ ಭೀತಿ ಒಡ್ಡಿದಾಗ ತಾವು ಕ್ಷಮೆಯಾಚಿಸಬೇಕಾಗಿ ಬಂದ ಪರಿಸ್ಥಿತಿಯನ್ನು ಅವರು ಹಂಚಿಕೊಂಡಿದ್ದರು. ನ್ಯಾಯಯುತವಾದ ಹೋರಾಟ ಇಲ್ಲದಿದ್ದಾಗ ಅಲ್ಲಿಂದ ಹಿಂದೆ ಸರಿಯುವುದೇ ಬುದ್ಧಿವಂತಿಕೆ ಎಂದು ಸಮಯ್ ಅಭಿಪ್ರಾಯಪಟ್ಟಿದ್ದರು. ಅಭಿಜೀತ್ ದೀಪ್ಕೆ ಅವರು ಇದೇ ವಿಷಯವನ್ನು ಮುಂದಿಟ್ಟುಕೊಂಡು ಸಮಯ್ ರೈನಾ ಅವರನ್ನು ಟೀಕಿಸಿದ್ದರು. ಆದರೆ ಸದ್ಯ ನೆಟ್ಟಿಗರ ತಿರುಗೇಟಿನಿಂದಾಗಿ ಸ್ವತಃ ಅಭಿಜೀತ್ ಅವರೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗುವಂತಾಗಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.