ವಿಜಯನಗರ: ಶಾಲೆಯೊಂದರ ಬಿಸಿಯೂಟ ತಯಾರಿಸುವ ಕೊಠಡಿಯಲ್ಲಿ ಏಕಾಏಕಿ ಸಿಲಿಂಡರ್ ಗ್ಯಾಸ್ ಲೀಕ್ ಆಗಿ ಭೀಕರ ಬೆಂಕಿ ಕಾಣಿಸಿಕೊಂಡಿರುವ ಆತಂಕಕಾರಿ ಘಟನೆಯೊಂದು ವಿಜಯನಗರ ಜಿಲ್ಲೆಯಲ್ಲಿ ಸಂಭವಿಸಿದೆ. ನಿನ್ನೆ ಸಂಜೆ 4 ಗಂಟೆಯ ಸುಮಾರಿಗೆ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಕಡತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಅವಘಡ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ, ಒಂದು ಕ್ಷಣ ಇಡೀ ಗ್ರಾಮವೇ ಬೆಚ್ಚಿಬೀಳುವಂತಾಗಿತ್ತು. ನಿನ್ನೆ ಸಂಜೆ ಶಾಲೆಯಲ್ಲಿ ವಿದ್ಯಾರ್ಥಿಗಳು ಇದ್ದ ವೇಳೆಯಲ್ಲೇ ಬಿಸಿಯೂಟದ ಕೊಠಡಿಯಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಧಗಧಗನೆ ಹೊತ್ತಿ ಉರಿಯಲು ಪ್ರಾರಂಭಿಸಿದೆ. ಒಮ್ಮೆಲೇ ಬೆಂಕಿಯ ಜ್ವಾಲೆ ಹೆಚ್ಚಾಗುತ್ತಿದ್ದಂತೆ ಸುತ್ತಮುತ್ತಲಿನ ಜನರು ಹಾಗೂ ಶಾಲಾ ಸಿಬ್ಬಂದಿ ತೀವ್ರ ಆತಂಕಕ್ಕೆ ಒಳಗಾಗಿ, ಗಾಬರಿಯಿಂದ ನೋಡುತ್ತಾ ನಿಂತಿದ್ದರು. ಶಾಲೆಯಲ್ಲಿ ಸಣ್ಣ ಸಣ್ಣ ಮಕ್ಕಳು ಇದ್ದಿದ್ದರಿಂದ ಏನಾಗುತ್ತದೋ ಎಂಬ ಭೀತಿ ಎಲ್ಲರಲ್ಲೂ ಮನೆಮಾಡಿತ್ತು.
ಗ್ರಾಮಸ್ಥರ ಸಮಯ ಪ್ರಜ್ಞೆ, ತಪ್ಪಿದ ಬಾರೀ ದುರಂತ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಗ್ರಾಮಸ್ಥರು ಭಾರಿ ಸಮಯಪ್ರಜ್ಞೆ ಮೆರೆದಿದ್ದಾರೆ. ಸಮಯ ವ್ಯರ್ಥ ಮಾಡದೆ ಶಾಲೆಯಲ್ಲಿದ್ದ ಬೆಂಕಿ ನಂದಿಸುವ ಸಾಧನಗಳನ್ನು ಬಳಸಿಕೊಂಡು ತಾವೇ ಖುದ್ದಾಗಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಗ್ರಾಮಸ್ಥರ ಕ್ಷಿಪ್ರ ಹರಸಾಹಸದ ಫಲವಾಗಿ ಬೆಂಕಿ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದು, ಒಂದು ದೊಡ್ಡ ಮಟ್ಟದ ದುರಂತ ಕೂದಲೆಳೆಯ ಅಂತರದಲ್ಲಿ ತಪ್ಪಿದಂತಾಗಿದೆ.
ಗ್ಯಾಸ್ ಏಜೆನ್ಸಿ ವಿರುದ್ಧ ಗ್ರಾಮಸ್ಥರ ತೀವ್ರ ಆಕ್ರೋಶ ಈ ಘಟನೆಯ ಬೆನ್ನಲ್ಲೇ ಗ್ಯಾಸ್ ಏಜೆನ್ಸಿಗಳ ವಿರುದ್ಧ ಕಡತಿ ಗ್ರಾಮದ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಗ್ಯಾಸ್ ಏಜೆನ್ಸಿಯವರು ಶಾಲೆಗಳಿಗೆ ಸರಿಯಾದ ಸಿಲಿಂಡರ್ ನೀಡುತ್ತಿಲ್ಲ, ಪದೇ ಪದೇ ಲೀಕೇಜ್ ಆಗುವ ಹಳೆಯ ಹಾಗೂ ದೋಷಪೂರಿತ ಸಿಲಿಂಡರ್ ಗಳನ್ನು ವಿತರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಗಂಭೀರವಾಗಿ ಆರೋಪಿಸಿದ್ದಾರೆ.
ಒಂದು ವೇಳೆ ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸದೇ ಹೋಗಿದ್ದರೆ ಅಥವಾ ಸಿಲಿಂಡರ್ ಸ್ಫೋಟಗೊಂಡಿದ್ದರೆ ನೂರಾರು ಮಕ್ಕಳ ಜೀವಕ್ಕೆ ಆಪತ್ತು ಎದುರಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹಲವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದು, ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ.