ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಳೆ (ಜು.2) ನವದೆಹಲಿಗೆ ತೆರಳಲಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತು ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ. ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ, ಪ್ರಾದೇಶಿಕ ಮತ್ತು ಜಾತಿ ಸಮತೋಲನ, ಹಿರಿಯ-ಕಿರಿಯ ನಾಯಕರಿಗೆ ಅವಕಾಶ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅಂತಿಮ ಚರ್ಚೆ ನಡೆಯುವ ನಿರೀಕ್ಷೆಯಿದೆ.
ಸಂಪುಟ ಸೇರಲು ಶಾಸಕರ ಸರ್ಕಸ್!
ಸಚಿವ ಸಂಪುಟ ವಿಸ್ತರಣೆ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ. 40ಕ್ಕೂ ಹೆಚ್ಚು ಶಾಸಕರು ಹಾಗೂ ಅವರ ಬೆಂಬಲಿಗರು ದೆಹಲಿ ಮತ್ತು ಬೆಂಗಳೂರಿನಲ್ಲಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಪ್ರಯತ್ನ ನಡೆಸುತ್ತಿದ್ದಾರೆ. ಕೆಲವೆಡೆ ಬೆಂಬಲಿಗರು ಪ್ರತಿಭಟನೆ ನಡೆಸಿ ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿರುವ ಬೆಳವಣಿಗೆಗಳೂ ನಡೆದಿವೆ. ಸಚಿವ ಸ್ಥಾನದ ರೇಸ್‌ನಲ್ಲಿ ಬಸವರಾಜ ರಾಯರೆಡ್ಡಿ, ಬಿ.ಆರ್. ಪಾಟೀಲ್, ಅಜಯ್ ಸಿಂಗ್, ರಿಜ್ವಾನ್ ಅರ್ಷದ್, ಕೊತ್ತೂರು ಮಂಜುನಾಥ್, ಶರಣಬಸಪ್ಪ ದರ್ಶನಾಪುರ, ಎಚ್.ಸಿ. ಬಾಲಕೃಷ್ಣ, ವಿಜಯಾನಂದ ಕಾಶಪ್ಪನವರ್, ಎಸ್.ಎನ್. ಸುಬ್ಬಾರೆಡ್ಡಿ, ರಾಜು ಕಾಗೆ, ಸ್ಟಾರ್ ಚಂದ್ರು (ಟಿ. ವೆಂಕಟರಮಣೇಗೌಡ), ಸೇರಿದಂತೆ ಹಲವು ಶಾಸಕರ ಹೆಸರುಗಳು ಕೇಳಿಬರುತ್ತಿವೆ. ಕೆಲವು ಹಾಲಿ ಸಚಿವರ ಖಾತೆ ಬದಲಾವಣೆ ಬಗ್ಗೆಯೂ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಮೊದಲ ಸಂಪುಟದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿಲ್ಲ. ಹಾಗಾಗಿ ಸಂಪುಟ ವಿಸ್ತರಣೆಯಲ್ಲಿ ಅವಕಾಶ ದೊರಕಬಹುದು ಎನ್ನಲಾಗಿದೆ. ಕಳೆದ ಬಾರಿ ಪ್ರಭಾವಿ ಖಾತೆ ಹೊಂದಿದ್ದ ಲಕ್ಷ್ಮಿ ಹೆಬ್ಬಾಳ್ಕರ್‌ರವರಿಗೆ ಈ ಬಾರಿಯಾದರೂ ಅವಕಾಶ ದೊರಕಬಹುದೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದಲ್ಲದೆ ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವೆಯಾಘಿದ್ದರಿಂದ ಬೇರಾದರೂ ಮಹಿಳೆಗೆ ಅವಕಾಶ ಸಿಗಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ. ಮಹಿಳಾ ಪ್ರತಿನಿಧ್ಯದ ಕುರಿತು ಅಂತಿಮ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳುವ ಸಾಧ್ಯತೆ ಇದೆ. ದೆಹಲಿಯಲ್ಲಿ ನಡೆಯಲಿರುವ ಸಭೆಯ ಬಳಿಕವೇ ಸಚಿವ ಸಂಪುಟ ವಿಸ್ತರಣೆ, ಹೊಸ ಸಚಿವರ ಪಟ್ಟಿ ಹಾಗೂ ಪ್ರಮಾಣ ವಚನ ದಿನಾಂಕದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆ ವ್ಯಕ್ತವಾಗಿದೆ.