2026-03-07 03:03:50

Sara Subbarao | ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ ಸರಳ ಸುಬ್ಬರಾವ್ | Speed News Kannada

Sara Subbarao | ಟ್ರೇಲರ್ ನಲ್ಲೇ ಕುತೂಹಲ ಮೂಡಿಸಿದ ಸರಳ ಸುಬ್ಬರಾವ್ | Speed News Kannada

ಪ್ರೇಮಿಗಳ ದಿನದ ಸಂದರ್ಭದಲ್ಲಿ ತೆರೆಗೆ ಬರಲಿದೆ 1970ರ ಕಾಲಘಟ್ಟದ ಈ ಪ್ರೇಮ ಕಥಾನಕ .

ರಿಯಾನ್ ಕ್ರಿಯೇಷನ್ಸ್ ಲಾಂಛನದಲ್ಲಿ ಲೋಹಿತ್ ನಂಜುಂಡಯ್ಯ ನಿರ್ಮಿಸಿರುವ,  ಸದಭಿರುಚಿ ಚಿತ್ರಗಳ ನಿರ್ದೇಶಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಅಜೇಯ್ ರಾವ್ ಹಾಗೂ ಮಿಶಾ ನಾರಂಗ್ ನಾಯಕ, ನಾಯಕಿಯಾಗಿ ನಟಿಸಿರುವ ಮತ್ತು 1970 ರ ಕಾಲಘಟ್ಟದ ಪ್ರೇಮ ಕಥಾನಕ ಹೊಂದಿರುವ "ಸರಳ ಸುಬ್ಬರಾವ್" ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನಿರೀಕ್ಷೆಗೂ ಮೀರಿ ಟ್ರೇಲರ್ ಗೆ ಮೆಚ್ಚುಗೆಯಾಗುತ್ತಿದೆ. ಫೆಬ್ರವರಿ 12 ರಂದು ಚಿತ್ರ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

"ಸರಳ ಸುಬ್ಬರಾವ್" 1970 ರ ಕಾಲಘಟ್ಟದ ಪ್ರೇಮಕಥೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರ ಫೆಬ್ರವರಿ 12 ರಂದು ತೆರೆಗೆ ಬರಲಿದೆ. ತ್ರಿವೇಣಿ ಅವರ ಕಾದಂಬರಿ ಆಧರಿಸಿದ ಕಥೆ ಇದು. ಈವರೆಗೂ ಕನ್ನಡದಲ್ಲಿ ತ್ರಿವೇಣಿ ಅವರ ಕಾದಂಬರಿಗಳನ್ನು ಆಧರಿಸಿ ಬಂದಿರುವ ಚಿತ್ರಗಳೆಲ್ಲಾ ಗೆದ್ದಿದೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಕಥೆ ಕೂಡ. ನಮ್ಮ ಚಿತ್ರ ಎಲ್ಲರಿಗೂ ಮೆಚ್ಚುಗೆಯಾಗುವ ಭರವಸೆ ಇದೆ. ಹೆಚ್ಚು ಕಡಿಮೆ ನೂರು ವರ್ಷಗಳ ಇತಿಹಾಸವಿರುವ ಮೈಸೂರಿನ ಮನೆಯೊಂದರಲ್ಲಿ ನಮ್ಮ ಚಿತ್ರದ ಚಿತ್ರೀಕರಣ ನಡೆದಿದೆ. ಈಗಾಗಲೇ ಟೀಸರ್, ಟ್ರೇಲರ್ ಹಾಗೂ ಹಾಡುಗಳ  ಮೂಲಕ ನಮ್ಮ ಚಿತ್ರ ನೋಡುಗರ ಮನ ಗೆದ್ದಿದೆ.  ಅಜೇಯ್ ರಾವ್ ನಾಯಕರಾಗಿ ನಟಿಸಿರುವ ಈ ಚಿತ್ರದ ನಾಯಕಿ   ಪಂಜಾಬಿನ ಮಿಶಾ ನಾರಂಗ್.   ರಂಗಾಯಣ ರಘು, ವೀಣಾ ಸುಂದರ್, ಶ್ರೀ, ರಘು ರಾಮನಕೊಪ್ಪ, ವಿಜಯ್ ಚಂಡೂರ್ ಹೀಗೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ‌. ಅಂತರಾಷ್ಟ್ರೀಯ ಖ್ಯಾತಿಯ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪ್ರದೀಪ್ ಪದ್ಮಕುಮಾರ್ ಛಾಯಾಗ್ರಹಣ ಹಾಗೂ  ಬಸವರಾಜ್ ಅರಸ್ ಸಂಕಲನ "ಸರಳ ಸುಬ್ಬರಾವ್" ಚಿತ್ರಕ್ಕಿದೆ ಎಂದು ನಿರ್ದೇಶಕ ಮಂಜು ಸ್ವರಾಜ್ ತಿಳಿಸಿದರು.

ನಾನು ಹುಟ್ಟಿದ್ದು 1980ರಲ್ಲಿ. ಈ ಚಿತ್ರದ ಕಥೆ ನಡೆಯುವುದು 1970ರ ಕಾಲಘಟ್ಟದಲ್ಲಿ ಎಂದು ಮಾತನಾಡಿದ ನಾಯಕ ಅಜೇಯ್ ರಾವ್, ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಕಥೆಯನ್ನು  ನಿರ್ದೇಶಕ ಮಂಜು ಸ್ವರಾಜ್ ಹಾಗೂ ನಿರ್ಮಾಪಕ ಲೋಹಿತ್ ಆಯ್ಕೆ ಮಾಡಿಕೊಂಡಿದ್ದಾರೆ. ರೆಟ್ರೊ ಶೈಲಿಯಲ್ಲಿ ಕಾಣಿಸಿಕೊಂಡಿರುವಿದಕ್ಕೆ ಖುಷಿಯಿದೆ. ಟ್ರೇಲರ್ ಎಲ್ಲರ ಗಮನ ಸೆಳೆದಿದೆ.  ಪ್ರೇಮಿಗಳ ದಿನದ ಸಂದರ್ಭದಲ್ಲಿ ನಮ್ಮ ಚಿತ್ರ ತೆರೆಗೆ ಬರಲಿದೆ. ಎಲ್ಲರೂ ಚಿತ್ರಮಂದಿರಗಳಲ್ಲಿ ಕುಟುಂಬ ಸಮೇತ ನಮ್ಮ ಚಿತ್ರ ನೋಡುವ ಮೂಲಕ  ಪ್ರೋತ್ಸಾಹಿಸಿ ಎಂದರು. 

ಈ ಚಿತ್ರದಲ್ಲಿ ನಟಿಸಿದ್ದು ಬಹಳ ಖುಷಿಯಾಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕಿ ಮಿಶಾ ನಾರಂಗ್‌.

ನಿರ್ದೇಶಕರು ಹೇಳಿದ ಈ ಕಥೆ ಬಹಳ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಅಜೇಯ್ ರಾವ್ ಸೇರಿದಂತೆ ಚಿತ್ರತಂಡದ ಎಲ್ಲರ ಸಹಕಾರದಿಂದ ನಮ್ಮ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಫೆಬ್ರವರಿ 12 ರಂದು ನಮ್ಮ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ‌. ಪ್ರೋತ್ಸಾಹ ನೀಡಿ ಎಂದು ನಿರ್ಮಾಪಕ ಲೋಹಿತ್ ನಂಜುಂಡಯ್ಯ ಹೇಳಿದರು.

ಚಿತ್ರದಲ್ಲಿ ನಟಿಸಿರುವ ರಘು ರಾಮನಕೊಪ್ಪ, ವೀಣಾ ಸುಂದರ್, ಚಿತ್ಕಲಾ ಬಿರಾದಾರ್ ಮುಂತಾದ ಚಿತ್ರತಂಡದ ಸದಸ್ಯರು "ಸರಳ ಸುಬ್ಬರಾವ್" ಚಿತ್ರದ ಕುರಿತು ಮಾತನಾಡಿದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.