ಬೆಂಗಳೂರು: ಬೆಳಗಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮೂರು ದಿನಗಳ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ವಾರ್ಷಿಕ ಸಭೆ ಇಂದಿನಿಂದ ಆರಂಭವಾಗಿದ್ದು, ಇದೇ ಬೆನ್ನಲ್ಲೇ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ (BJP), ಆರ್‌ಎಸ್‌ಎಸ್ ಮತ್ತು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಸಭೆ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ ಎಂದ ಅವರು, ರಾಮಮಂದಿರದ ಹುಂಡಿ ಕಳ್ಳತನದ ಕ್ರೆಡಿಟ್ ಅನ್ನು ಅವರೇ ತೆಗೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು. ಕಳ್ಳತನದಲ್ಲಿ ಯಾರಿಗೆ ಎಷ್ಟು ಪಾಲು ಬಂದಿದೆ ಎಂಬುದನ್ನು ಅವರೇ ಬಹಿರಂಗಪಡಿಸಲಿ ಎಂದು ಸಚಿವರು ಸವಾಲು ಹಾಕಿದರು. ಇದೇ ವೇಳೆ ರಾಜ್ಯ ಸರ್ಕಾರ ನೀಡುತ್ತಿರುವ ವಾಸಸ್ಥಳ ಪ್ರಮಾಣಪತ್ರಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವುದನ್ನು ತಳ್ಳಿಹಾಕಿದ ಪ್ರಿಯಾಂಕ್ ಖರ್ಗೆ, ಶಾಸಕರಾಗಿ ಶಾಸನ ರೂಪಿಸುವುದು ನಮ್ಮ ಕೆಲಸ ಮತ್ತು ಸರ್ಕಾರದಿಂದ ಅಧಿಕೃತವಾಗಿಯೇ ಈ ಪತ್ರಗಳನ್ನು ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಎಸ್‌ಐಆರ್ (SIR) ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಬೇಕಿದೆ ಎಂದ ಅವರು, ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕಪಿಮುಷ್ಠಿಯಲ್ಲಿದೆ ಎಂದು ಗಂಭೀರ ಆರೋಪ ಮಾಡಿದರು.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಆಯೋಗವು ಅಡ್ಡಾದಿಡ್ಡಿಯಾಗಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡುತ್ತಿದೆ. ನಾಗರಿಕತ್ವ ಸಾಬೀತುಪಡಿಸಲು ಪಾಸ್‌ಪೋರ್ಟ್‌ನಂತಹ ದಾಖಲೆಗಳನ್ನು ಕೇಳುತ್ತಿರುವುದು ಆಯೋಗದ ನಡೆಗೆ ಶೋಭೆ ತರುವುದಿಲ್ಲ ಎಂದು ಅವರು ಕಿಡಿಕಾರಿದರು. ಬಿಜೆಪಿಯಲ್ಲಿ ಸದ್ಯ ನಾಯಕತ್ವದ ಗೊಂದಲ ತಾರಕಕ್ಕೇರಿದ್ದು, ಅಡ್ಡಮತದಾನ ನಡೆದಿದ್ದರೂ ಯಾರ ವಿರುದ್ಧವೂ ಕ್ರಮ ಕೈಗೊಳ್ಳಲು ಸಾಧ್ಯವಾಗದ ಸ್ಥಿತಿಯಲ್ಲಿ ಅವರಿದ್ದಾರೆ ಎಂದು ಲೇವಡಿ ಮಾಡಿದರು.
ಇನ್ನು ಮಹಾರಾಷ್ಟ್ರದ ಗಡಿ ವಿವಾದ ಹಾಗೂ ಮರಾಠಿಗರ ಪ್ರಚೋದನಾತ್ಮಕ ನಡೆಗಳ ಕುರಿತು ಎಚ್ಚರಿಕೆ ನೀಡಿದ ಸಚಿವರು, ನಾಡಿನ ನೆಲ, ಜಲ ಮತ್ತು ಭಾಷೆಯ ವಿಷಯದಲ್ಲಿ ಯಾರೇ ಕೈಯಾಡಿಸಿದರೂ ನಾವು ಸುಮ್ಮನೆ ಕೂರುವುದಿಲ್ಲ ಎಂದರು. ಕಾನೂನು ಸುವ್ಯವಸ್ಥೆ ಕೆಡಿಸುವ ಮಾತುಗಳನ್ನಾಡದಂತೆ ಮಹಾರಾಷ್ಟ್ರದ ನಾಯಕರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಇದರೊಂದಿಗೆ ಯುಜಿಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬಗ್ಗೆಯೂ ಧ್ವನಿ ಎತ್ತಿದ ಅವರು, ದೇಶದಲ್ಲಿ ಇಂತಹ ಗಂಭೀರ ಸಮಸ್ಯೆಗಳಾದಾಗ ಪ್ರಧಾನಿ ಮೋದಿ ಅವರು ದೇಶ ಬಿಟ್ಟು ಓಡಿಹೋಗುತ್ತಾರೆ ಎಂದು ಟೀಕಿಸಿದರು. ಲಕ್ಷಾಂತರ ಅಮಾಯಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದ ಈ ಹಗರಣದ ಹೊಣೆ ಹೊತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಪಡೆಯಲು ಪ್ರಧಾನಿಗಳಿಗೆ ಶಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು. ದಾವಣಗೆರೆಯಲ್ಲಿ ನಡೆದ ಲವ್ ಜಿಹಾದ್ ಪ್ರಕರಣ ಮತ್ತು ಭಜರಂಗದಳದ ಕಾರ್ಯಕರ್ತರ ದಾಳಿ ಕುರಿತು ಮಾತನಾಡಿದ ಅವರು, ಸಾರ್ವಜನಿಕರು ಕಾನೂನನ್ನು ಕೈಗೆತ್ತಿಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಎಚ್ಚರಿಸಿದರು. ಯಾವುದೇ ಸಮಸ್ಯೆ ಇದ್ದರೂ ಪೊಲೀಸ್ ಠಾಣೆಗೆ ದೂರು ನೀಡಿ ಕಾನೂನುಬದ್ಧ ಕ್ರಮಕ್ಕೆ ಸಹಕರಿಸಬೇಕೇ ವಿನಃ ನೈತಿಕ ಪೊಲೀಸ್‌ಗಿರಿ ಮಾಡಲು ಮುಂದಾದರೆ ಅಂತಹವರ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಖಡಕ್ ಆಗಿ ತಿಳಿಸಿದರು.