ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026 ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆಯುತ್ತಿರುವ ಮೊದಲ ದಸರಾ ಮಹೋತ್ಸವ ಇದಾಗಿದ್ದು, ನಾಡ ಹಬ್ಬ ದಸರಾ ಮಹೋತ್ಸವಕ್ಕೆ ರಾಜ್ಯ ಸರ್ಕಾರ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ವಿಧಾನಸೌಧದ ಸಮ್ಮೇಳನ ಸಭಾಗಂಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಮೈಸೂರು ದಸರಾ ಕುರಿತ ಸಭೆಯಲ್ಲಿ ಮೈಸೂರು ದಸರಾ ಮಹೋತ್ಸವ ಹಾಗೂ ಜಂಬೂಸವಾರಿಗೆ ದಿನಾಂಕ ನಿಗದಿಪಡಿಸಲಾಯಿತು.
ಆಗಸ್ಟ್ 26ರಂದು ಮೈಸೂರು ಅರಮನೆ ಪ್ರವೇಶ ದ್ವಾರದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಗುತ್ತದೆ. ಅಕ್ಟೋಬರ್ 11ರಂದು ಬೆಳಿಗ್ಗೆ 11:50ಕ್ಕೆ ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾ ಉದ್ಘಾಟನೆ ನಡೆಯಲಿದೆ. ಶುಭ ಧನುರ್ ಲಗ್ನದಲ್ಲಿ ಮೈಸೂರು ದಸರಾ ಉದ್ಘಾಟನೆಯಾಗಲಿದೆ. ಅಕ್ಟೋಬರ್ 21ರ ಸಂಜೆ 4:10ರಿಂದ 4:35ರ ನಡುವೆ ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ನೆರವೇರಲಿದೆ. ಅಕ್ಟೋಬರ್ 21ರಂದು ವಿಶ್ವವಿಖ್ಯಾತ ಜಂಬೂಸವಾರಿ ನಡೆಯಲಿದೆ ಎಂದು ತಿಳಿದುಬಂದಿದೆ.