ನಕಲಿ ನೋಟು ದಂಧೆ ಅಂದಾಕ್ಷಣ ಕೋಟ್ಯಂತರ ರೂಪಾಯಿ ಡೀಲ್, ಸಿನಿಮೀಯ ಮಾಫಿಯಾಗಳ ನೆನಪಾಗಬಹುದು. ಆದರೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸರು ಭೇದಿಸಿರುವ ಈ ರಾಜ್ಯಮಟ್ಟದ ಖೋಟಾ ನೋಟು ಜಾಲದ ಕಥೆ ಕೇಳಿದರೆ ಯಾವುದೇ ಕ್ರೈಂ ವೆಬ್ ಸೀರೀಸ್ ಕೂಡ ಕಮ್ಮಿ ಅನಿಸುತ್ತದೆ. ಕೇವಲ ಒಂದೇ ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವು ಹಿಡಿದು ಹೊರಟ ಖಾಕಿ ಪಡೆ, ಬೆಂಗಳೂರು ಹಾಗೂ ಮೈಸೂರಿನವರೆಗೂ ಹರಡಿದ್ದ ದೊಡ್ಡ ನೆಟ್ವರ್ಕ್ ಅನ್ನು ಜಾಲಾಡಿದೆ. ಮುದ್ರಣದಿಂದ ಹಿಡಿದು ಚಲಾವಣೆಯವರೆಗೂ ಲಿಂಕ್ ಹೊಂದಿದ್ದ ಒಟ್ಟು ಆರು ಮಂದಿ ಖತರ್ನಾಕ್ ಆರೋಪಿಗಳನ್ನು ಪೊಲೀಸರು ಅತ್ಯಂತ ಚಾಣಾಕ್ಷತನದಿಂದ ಹೆಡೆಮುರಿ ಕಟ್ಟಿದ್ದಾರೆ.
ಈ ಇಡೀ ರೋಚಕ ಕಾರ್ಯಾಚರಣೆಗೆ ಮುನ್ನುಡಿ ಬರೆದಿದ್ದು ಹುಳಿಯಾರಿನ ಸಣ್ಣದೊಂದು ಪಾನ್ ಶಾಪ್. ಅಲ್ಲಿಗೆ ಬಂದಿದ್ದ ಇಬ್ಬರು ಕಿಡಿಗೇಡಿಗಳು ಸಿಗರೇಟ್ ಖರೀದಿಸಿ, ಅದಕ್ಕೆ ಪ್ರತಿಯಾಗಿ ಹೊಸದಾಗಿ ಮುದ್ರಿಸಿದಂತಿದ್ದ 500 ರೂಪಾಯಿಯ ನಕಲಿ ನೋಟು ನೀಡಿ ಜಾಗ ಖಾಲಿ ಮಾಡಿದ್ದರು. ಆದರೆ ನೋಟಿನ ಮೇಲೆ ಅನುಮಾನಗೊಂಡ ಅಂಗಡಿ ಮಾಲೀಕ ತಕ್ಷಣವೇ ಪೊಲೀಸರ ಗಮನಕ್ಕೆ ತಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ಅಲರ್ಟ್ ಆದ ಹುಳಿಯೂರು ಮತ್ತು ಚಿಕ್ಕನಾಯಕನಹಳ್ಳಿ ಪೊಲೀಸರು ಜಂಟಿಯಾಗಿ ತನಿಖೆ ಆರಂಭಿಸಿ, ಸಿಗರೇಟ್ ಕೊಳ್ಳಲು ಬಂದ ಲಿಂಕ್ ಹಿಡಿದು ಮೈಸೂರು ಮತ್ತು ಬೆಂಗಳೂರಿನಲ್ಲಿ ಭರ್ಜರಿ ಬೇಟೆಯಾಡಿದ್ದಾರೆ. ಈ ವೇಳೆ ಕಣ್ಣಿಗೆ ಮಣ್ಣೆರಚಿ ಸಾರ್ವಜನಿಕವಾಗಿ ಚಲಾವಣೆಯಾಗುತ್ತಿದ್ದ ಬೃಹತ್ ಜಾಲದ ಗುಟ್ಟು ರಟ್ಟಾಗಿದೆ.
ಕಾರ್ಖಾನೆಯಂತೆ ಕೆಲಸ ಮಾಡುತ್ತಿದ್ದ ದಂಧೆಕೋರರ ತಂತ್ರ ಇಲ್ಲಿದೆ:
ಬಂಧಿತ ಆರು ಮಂದಿ ಆರೋಪಿಗಳು ಕೇವಲ ಸಣ್ಣ ಪುಟ್ಟ ಕಳ್ಳರಲ್ಲ, ಬದಲಿಗೆ ಇವರದ್ದೇ ಆದ ಒಂದು ವ್ಯವಸ್ಥಿತವಾದ ಕಂಪನಿಯಂತೆ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ರುದ್ರೇಶ್ ಎಂಬಾತ ಹೈಟೆಕ್ ಉಪಕರಣಗಳನ್ನು ಬಳಸಿ ನಕಲಿ ನೋಟುಗಳನ್ನು ಅಚ್ಚುಕಟ್ಟಾಗಿ ಮುದ್ರಿಸುವ ಜವಾಬ್ದಾರಿ ಹೊತ್ತಿದ್ದ. ಹೀಗೆ ಪ್ರಿಂಟ್ ಆದ ನೋಟುಗಳನ್ನು ಮೈಸೂರಿನ ರವಿ ಎಂಬಾತ ಡೀಲ್ ಕುದುರಿಸಿ ಮಾರಾಟ ಮಾಡುತ್ತಿದ್ದ. ಇನ್ನು ಆಂಧ್ರಪ್ರದೇಶದ ಅನಂತಪುರ ಮೂಲದ ಕುಬೇರಪ್ಪ ಹಾಗೂ ಹನುಮಂತಪ್ಪ ಎಂಬುವವರು ಈ ನೋಟುಗಳನ್ನು ಕೊಳ್ಳುವ ಗ್ರಾಹಕರನ್ನು ಹುಡುಕಿಕೊಡುವ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿದ್ದರು.
ಕೊನೆಯದಾಗಿ, ಇವರಿಂದ ಕಮ್ಮಿ ಬೆಲೆಗೆ ಖೋಟಾ ನೋಟುಗಳನ್ನು ಖರೀದಿಸುತ್ತಿದ್ದ ವೆಂಕಟೇಶ್ ಮತ್ತು ತಿಲಕ್ ಕುಮಾರ್ ಎಂಬುವವರು ಹಳ್ಳಿಗಳ ಸಂತೆ, ಜಾತ್ರೆ ಹಾಗೂ ಜನಸಂದಣಿ ಇರುವ ಸಣ್ಣ ಸಣ್ಣ ಅಂಗಡಿಗಳಲ್ಲಿ ಅಸಲಿ ನೋಟುಗಳ ನಡುವೆ ಇವುಗಳನ್ನು ಮಿಕ್ಸ್ ಮಾಡಿ ಚಲಾವಣೆ ಮಾಡುತ್ತಿದ್ದರು. ಸದ್ಯ ಪೊಲೀಸರ ಈ ಮಿಂಚಿನ ದಾಳಿಯಿಂದಾಗಿ ದಂಧೆಯ ಜಾಲ ಮುರಿದುಬಿದ್ದಿದ್ದು, ಬಂಧಿತರಿಂದ ಸದ್ಯಕ್ಕೆ 500 ರೂಪಾಯಿ ಮುಖಬೆಲೆಯ 60ಕ್ಕೂ ಹೆಚ್ಚು ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆದರೆ ಪ್ರಾಥಮಿಕ ವಿಚಾರಣೆಯಲ್ಲೇ ಈ ಜಾಲವು ಈಗಾಗಲೇ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಕಲಿ ನೋಟುಗಳನ್ನು ಯಶಸ್ವಿಯಾಗಿ ಚಲಾವಣೆ ಮಾಡಿ ಸಾರ್ವಜನಿಕರಿಗೆ ಮತ್ತು ಬ್ಯಾಂಕುಗಳಿಗೆ ವಂಚಿಸಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಜಾಲದ ಹಿಂದೆ ಇನ್ನು ಯಾರ್ಯಾರು ದೊಡ್ಡ ತಲೆಗಳು ಅಡಗಿದ್ದಾರೆ ಮತ್ತು ಇದರ ಅಸಲಿ ಬೇರು ಎಲ್ಲಿದೆ ಎಂಬುದನ್ನು ಸಂಪೂರ್ಣವಾಗಿ ಕಿತ್ತೊಗೆಯಲು ಪೊಲೀಸರು ಈಗ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.