ಬೆಂಗಳೂರು: ಕರ್ನಾಟಕ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ 'ಕರ್ನಾಟಕ ಶಾಶ್ವತ ವಸತಿ ಪ್ರಮಾಣಪತ್ರ (PRC) - 2026' ನಿಯಮಾವಳಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಈ ಆದೇಶವು ಭಾರತದ ಸಂವಿಧಾನದ ಆಶಯಗಳಿಗೆ ಧಕ್ಕೆ ತರುವುದಲ್ಲದೆ, ದೇಶದ ಆಂತರಿಕ ಭದ್ರತೆಗೆ ದೊಡ್ಡ ಕಂಟಕವಾಗಲಿದೆ ಎಂದು ಆರೋಪಿಸಿರುವ ಅವರು, ಈ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸುದೀರ್ಘ ಪತ್ರ ಬರೆದು ತಕ್ಷಣವೇ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೂ ಒಂದೇ ಪೌರತ್ವವನ್ನು ಕಲ್ಪಿಸಿದೆ. ಆದರೆ ಕರ್ನಾಟಕ ಸರ್ಕಾರವು ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ 'ಶಾಶ್ವತ ನಿವಾಸಿಗಳು' ಎಂಬ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಹೊರಟಿರುವುದು ಕಾನೂನುಬಾಹಿರವಾಗಿದ್ದು, ಇದು ಸಂವಿಧಾನದ ಸಮಾನತೆಯ ಹಕ್ಕನ್ನು ಪ್ರತಿಪಾದಿಸುವ 14ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ಶೋಭಾ ಕರಂದ್ಲಾಜೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇವಲ ಸ್ಥಳೀಯ ಕಂದಾಯ ಅಧಿಕಾರಿಗಳ ಪರಿಶೀಲನೆ ಮತ್ತು ಸ್ಥಳೀಯ ದಾಖಲೆಗಳ ಆಧಾರದ ಮೇಲೆ ಈ ಪ್ರಮಾಣಪತ್ರವನ್ನು ನೀಡಲು ಉದ್ದೇಶಿಸಲಾಗಿದೆ. ಇದರಲ್ಲಿ ಭಾರತೀಯ ಪೌರತ್ವವನ್ನು ಕೇಂದ್ರ ಏಜೆನ್ಸಿಗಳ ಮೂಲಕ ಕಡ್ಡಾಯವಾಗಿ ಪರಿಶೀಲಿಸುವ ಯಾವುದೇ ದೃಢವಾದ ವ್ಯವಸ್ಥೆ ಇಲ್ಲ. ಇದರಿಂದಾಗಿ ದೇಶದೊಳಗೆ ಅಕ್ರಮವಾಗಿ ನುಸುಳಿರುವ ವಿದೇಶಿ ಪ್ರಜೆಗಳು ಅಥವಾ ಅಕ್ರಮ ವಲಸಿಗರು ಸುಲಭವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ 'ಶಾಶ್ವತ ವಸತಿ ಪ್ರಮಾಣಪತ್ರ' ಪಡೆಯುವ ಅಪಾಯವಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಒಮ್ಮೆ ಈ ಪ್ರಮಾಣಪತ್ರ ಕೈಸೇರಿದರೆ, ಅದನ್ನು ಬಳಸಿ ಅವರು ಸರ್ಕಾರದ ಸವಲತ್ತುಗಳು, ಶೈಕ್ಷಣಿಕ ಪ್ರವೇಶಾತಿ ಹಾಗೂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ. ಇದು ಅಕ್ರಮ ವಲಸಿಗರನ್ನು ಪತ್ತೆಹಚ್ಚಿ ಹೊರಹಾಕುವ ಕೇಂದ್ರ ಸರ್ಕಾರದ ಪ್ರಯತ್ನಗಳಿಗೆ ಭಾರಿ ಹಿನ್ನಡೆ ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಪೌರತ್ವ, ವಲಸೆ ಮತ್ತು ದೇಶದ ಆಂತರಿಕ ಭದ್ರತೆಯ ವಿಷಯಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ, ರಾಜ್ಯ ಸರ್ಕಾರಗಳು ಇಂತಹ ಕಾಯ್ದೆ ತರುವುದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಕರ್ನಾಟಕದ ಪರ್ಮನೆಂಟ್ ರೆಸಿಡೆನ್ಶಿಯಲ್ ಸರ್ಟಿಫಿಕೇಟ್ (PRC) ಆದೇಶದ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸಬೇಕು ಮತ್ತು ಈ ಪರಿಶೀಲನೆ ಮುಗಿಯುವವರೆಗೆ ಅಧಿಸೂಚನೆಯ ಅನುಷ್ಠಾನಕ್ಕೆ ತಕ್ಷಣವೇ ತಡೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅವರು ಕೇಂದ್ರ ಗೃಹ ಸಚಿವಾಲಯವನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಯಾವ ಅಧಿಕಾರದ ಅಡಿಯಲ್ಲಿ ಈ ನಿಯಮ ತರಲಾಗಿದೆ ಎಂದು ರಾಜ್ಯ ಸರ್ಕಾರದಿಂದ ವರದಿ ಕೇಳಬೇಕು ಮತ್ತು ಕೇಂದ್ರ ಏಜೆನ್ಸಿಗಳಿಂದ ಪೌರತ್ವ ಪರಿಶೀಲನೆ ಆಗದ ಹೊರತು ಯಾವುದೇ ಪ್ರಮಾಣಪತ್ರ ವಿತರಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಶೋಭಾ ಕರಂದ್ಲಾಜೆ ವಿನಂತಿಸಿದ್ದಾರೆ.