ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫುಟ್‌ಪಾತ್ ಸಮಸ್ಯೆಯಿಂದ ರಸ್ತೆಯಲ್ಲಿ ಓಡಾಡುವ ಜನರಿಗೆ ಸಮಸ್ಯೆಗಳಾಗುತ್ತಿರುವ ಹಿನ್ನೆಲೆ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಇಂದು ನಗರದ ಕ್ವಿನ್ಸ್ ರಸ್ತೆಯಲ್ಲಿ ಬಿಡಾಡಿ ವಾಹನಗಳಿಗೆ ನೊಟೀಸ್ ಅಂಟಿಸುವ ಮೂಲಕ ಪಾದಾಚಾರಿ ಮಾರ್ಗದಲ್ಲಿ ವಾಹನ ತೆರವು ಅಭಿಯಾನಕ್ಕೆ ಸಚಿವ ಕೃಷ್ಣ ಬೈರೇಗೌಡರು ಚಾಲನೆ ನೀಡಿದ್ದಾರೆ. ಪಾದಚಾರಿ ಮಾರ್ಗಗಳಲ್ಲಿ ಸಂಚರಿಸುವುದು ನಾಗರಿಕರ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಬೆಂಗಳೂರಿನಲ್ಲಿ ಈವರೆಗೆ ನಡೆದಿರುವ ಅಪಘಾತಗಳಲ್ಲಿ ಸುಮಾರು 931 ಪಾದಾಚಾರಿಗಳು ಪ್ರಾಣ ಕಳೆದುಕೊಂಡಿದ್ದು, 3,800ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಒತ್ತುವರಿ ತೆರವು ಅನಿವಾರ್ಯವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದುವರೆಗೆ ನಡೆದಿರುವ ಬೃಹತ್ ಕಾರ್ಯಾಚರಣೆಯಲ್ಲಿ ಫುಟ್‍ಪಾತ್‌ಗಳನ್ನು ಆಕ್ರಮಿಸಿಕೊಂಡಿದ್ದ 1,581 ರಾಂಪ್ ಹಾಗೂ ಮೆಟ್ಟಿಲುಗಳನ್ನು, 1,790 ಅಂಗಡಿಗಳ ಮುಂಭಾಗದ ಅನಧಿಕೃತ ಶೀಟ್‌ಗಳು ಮತ್ತು ಪರ್ಮನೆಂಟ್ ಸ್ಟ್ರಕ್ಚರ್‌ಗಳನ್ನು ಹಾಗೂ ಸುಮಾರು 2,200 ಕಡೆಗಳಲ್ಲಿ ಅಳವಡಿಸಲಾಗಿದ್ದ ಸೈನ್ ಬೋರ್ಡ್ ಮತ್ತು ಜಾಹೀರಾತು ಫಲಕಗಳನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯು ಕೇವಲ ಬೀದಿಬದಿ ವ್ಯಾಪಾರಿಗಳ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವರು, ವ್ಯಾಪಾರಿಗಳ ಹಿತರಕ್ಷಣೆಯನ್ನೂ ಸರ್ಕಾರ ಕಾಯಲಿದೆ ಎಂದಿದ್ದಾರೆ. ತಕ್ಷಣವೇ 'ಪ್ರಾವಿಜನಲ್ ಟೌನ್ ವೆಂಡಿಂಗ್ ಕಮಿಟಿ' ರಚಿಸಿ, ನಿಯಮಾನುಸಾರ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ವ್ಯಾಪಾರ ಮಾಡಲು ಪರ್ಯಾಯ ಜಾಗ ನಿಗದಿಪಡಿಸುವಂತೆ ಬಿಬಿಎಂಪಿ ಕಮಿಷನರ್‌ಗೆ ಸೂಚನೆ ನೀಡಲಾಗಿದೆ.
ಬೆಂಗಳೂರಿನಲ್ಲಿರುವ ಒಟ್ಟು 15 ರಿಂದ 18 ಸಾವಿರ ಕಿಲೋಮೀಟರ್ ರಸ್ತೆಗಳ ಪೈಕಿ ಸರ್ಕಾರ ಕೇವಲ 1,000 ಕಿಲೋಮೀಟರ್ ಮುಖ್ಯ ರಸ್ತೆಗಳನ್ನಷ್ಟೇ ಸದ್ಯಕ್ಕೆ ಗುರಿಯಾಗಿಸಿಕೊಂಡಿದೆ. ಆದ್ದರಿಂದ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಮುಖ್ಯ ರಸ್ತೆಗಳ ಫುಟ್‍ಪಾತ್‌ಗಳನ್ನು ಬಿಟ್ಟುಕೊಟ್ಟು, ಒಳರಸ್ತೆಗಳಲ್ಲಿ ವ್ಯಾಪಾರ ಮುಂದುವರಿಸಬೇಕು. ಅವರಿಗೆ ಪರ್ಯಾಯ ಬದುಕು ರೂಪಿಸಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರು ಮನವಿ ಮಾಡಿದ್ದಾರೆ. ನಗರದ ಸುಧಾರಣೆಗಾಗಿ ಮತ್ತು ಸುಪ್ರೀಂ ಕೋರ್ಟ್ ಆದೇಶದ ಪಾಲನೆಗಾಗಿ ಈ ಕಠಿಣ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರೆಯಲಿದೆ ಎಂದು ಅವರು ಖಡಕ್ ಆಗಿ ಹೇಳಿದ್ದಾರೆ.