2026-03-07 03:06:53

Pakistan Who Came Out On Top And Won The First Match | ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ಗೆದ್ದ ಪಾಕಿಸ್ತಾನಕ್ಕೆ ನಡುಕ! | Speed News Kannada

Pakistan Who Came Out On Top And Won The First Match | ಮೊದಲ ಪಂದ್ಯದಲ್ಲಿ ಎದ್ದು ಬಿದ್ದು ಗೆದ್ದ ಪಾಕಿಸ್ತಾನಕ್ಕೆ ನಡುಕ! | Speed News Kannada

ಟಿ20 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಗೆಲ್ಲುವ ಮೂಲಕ ಪಾಕಿಸ್ತಾನ್ ಶುಭಾರಂಭ ಮಾಡಿದೆ. ಈ ಶುಭಾರಂಭರೋಚಕ ಗೆಲುವಿನೊಂದಿಗೆ ಎಂಬುದು ಇಲ್ಲಿ ಉಲ್ಲೇಖಾರ್ಹ. ಅಂದರೆ ನೆದರ್‌ಲೆಂಡ್ಸ್ ವಿರುದ್ಧದ ಈ ಪಂದ್ಯದಲ್ಲಿ ಪಾಕ್ ಪಡೆ ಅಂತಿಮ ಓವರ್‌ನಲ್ಲಿ ಗೆಲುವು ದಾಖಲಿಸಿತ್ತು.ಅದು ಸಹ 3 ವಿಕೆಟ್ಗಳಿಂದ.
ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೆದರ್‌ಲೆಂಡ್ಸ್ ತಂಡವು ಕಲೆಹಾಕಿದ್ದು ಕೇವಲ 147 ರನ್‌ಗಳು ಮಾತ್ರ.
ಆದರೆ ಈ ಗುರಿಯನ್ನು ಬೆನ್ನತ್ತುವಲ್ಲಿ ಪಾಕ್ ಪಡೆ ಅಕ್ಷರಶಃ ಒದ್ದಾಡಿದರು. ಅದರಲ್ಲೂ ಕೊನೆಯ 2 ಓವರ್‌ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ 29 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಮ್ಯಾಕ್ಸ್ ಒಡೌಡ್ ಬಿಟ್ಟ ಕ್ಯಾಚ್ ನೆದರ್‌ಲೆಂಡ್ಸ್ ಪಾಲಿಗೆ ಮುಳುವಾಯಿತು.
ಅಂತಿಮ ಹಂತದಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಂಡ ಫಯೀಮ್ ಅಶ್ರಫ್ 19ನೇ ಓವರ್ ನಲ್ಲಿ 24 ರನ್ ಚಚ್ಚಿದರು. ಅಲ್ಲದೆ ಕೊನೆಯ ಓವರ್‌ನ 3ನೇ ಎಸೆತದಲ್ಲಿ ಫೋರ್ ಬಾರಿಸಿ ಪಾಕಿಸ್ತಾನ್ ತಂಡಕ್ಕೆ 3 ವಿಕೆಟ್‌ಗಳ ರೋಚಕ ಗೆಲುವು ತಂದು ಕೊಟ್ಟರು.
ಅಂದರೆ ಇಲ್ಲಿ ನೆದರ್‌ಲೆಂಡ್ಸ್ ಫೀಲ್ಡರ್ ಮಾಡಿದ ತಪ್ಪಿನಿಂದಾಗಿ ಪಾಕಿಸ್ತಾನ್ ತಂಡ ಗೆಲ್ಲುವಂತಾಯಿತು ಎಂದರೆ ತಪ್ಪಾಗಲಾರದು. ಏಕೆಂದರೆ ಫಯೀಮ್ ಅಶ್ರಫ್ ವಿಕೆಟ್ ಪಡೆದಿದ್ದರೆ, ಪಂದ್ಯವು ಸಂಪೂರ್ಣ ನೆದರ್‌ಲೆಂಡ್ಸ್ ಪರ ವಾಲುತ್ತಿತ್ತು. ಆದರೆ ಅಂತಿಮ ಹಂತದಲ್ಲಿ ಮ್ಯಾಕ್ಸ್ ಒಡೌಡ್ ಮಾಡಿದ ತಪ್ಪಿನಿಂದಾಗಿ ನೆದರ್‌ಲೆಂಡ್ಸ್ ಸೋಲನುಭವಿಸಿತು.
ಇದೀಗ ಪಾಕಿಸ್ತಾನ್ ತಂಡವು ತನ್ನ 2ನೇ ಪಂದ್ಯವಾಡಲು ಸಜ್ಜಾಗಿದೆ. ಇಂದು (ಫೆ.10) ನಡೆಯಲಿರುವ ಟಿ20 ವಿಶ್ವಕಪ್‌ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಯುಎಸ್‌ಎ ಮುಖಾಮುಖಿಯಾಗಲಿದೆ. ಮೊದಲ ಪಂದ್ಯದಲ್ಲೇ ಎದ್ದು ಬಿದ್ದು ಗೆದ್ದಿರುವ ಪಾಕ್ ಪಡೆಗೆ ಇದೀಗ ಇತಿಹಾಸದ್ದೇ ಚಿಂತೆ.ಮರುಕಳಿಸಲಿದೆಯಾ ಇತಿಹಾಸ? ಪಾಕಿಸ್ತಾನ್ ಮತ್ತು ಯುಎಸ್ಎ ಟಿ20 ಕ್ರಿಕೆಟ್‌ನಲ್ಲಿ ಈವರೆಗೆ ಒಮ್ಮೆ ಮಾತ್ರ ಮುಖಾಮುಖಿಯಾಗಿದೆ. ಈ ಮುಖಾಮುಖಿಯಲ್ಲಿ ಗೆದ್ದಿರುವುದು ಯುಎಸ್ಎ ಎಂಬುದು ವಿಶೇಷ. ಅಂದರೆ 2024 ರಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕ್ ಪಡೆಯನ್ನು ಬಗ್ಗು ಬಡಿಯುವಲ್ಲಿ ಯುಎಸ್‌ಎ ಯಶಸ್ವಿಯಾಗಿತ್ತು.
ಡಲ್ಲಾಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 159 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಯುಎಸ್ಎ ತಂಡವು ಅಂತಿಮ ಓವರ್‌ನಲ್ಲಿ 14 ರನ್‌ಗಳಿಸಿ ಪಂದ್ಯವನ್ನು ಟೊ ಮಾಡಿಕೊಂಡಿದ್ದರು.
ಇನ್ನು ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಯುಎಸ್‌ಎ ತಂಡವು 18 ರನ್ ಕಲೆಹಾಕಿದ್ದರು. 19 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ್ 13 ರನ್‌ ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಯುಎಸ್ಎ ತಂಡ 5 ರನ್‌ಗಳ ವಿಜಯ ಸಾಧಿಸಿತ್ತು. ಇದೀಗ ಮತ್ತೊಮ್ಮೆ ಪಾಕಿಸ್ತಾನ್ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ ಯುಎಸ್‌ಎ. ಅದರಲ್ಲೂ ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿರುವ ಭಾರತ ತಂಡವನ್ನೇ ಕಾಡಿದ್ದ ಯುಎಸ್‌ಎ ಬೌಲರ್ ಗಳು ಪಾಕಿಸ್ತಾನ್ ತಂಡವನ್ನು ಸಹ ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವುದರಲ್ಲಿ ಅನುಮಾನವೇ ಇಲ್ಲ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.