ನವದೆಹಲಿ: ಮುಂಬೈಯಲ್ಲಿ 2008ರ ನವೆಂಬರ್ 26ರಂದು (26/11) ನಡೆದಿದ್ದ ದಾಳಿ ಮಾದರಿಯಲ್ಲೇ ಈ ವರ್ಷದಲ್ಲೂ ದಾಳಿ ನಡೆಸುತ್ತೇವೆ ಎಂದು ಲಷ್ಕರ್-ಎ-ತಯಬಾ (ಎಲ್‌ಇಟಿ) ಸಂಘಟನೆ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಬೆದರಿಕೆ ಒಡ್ಡಿದ್ದಾನೆ. ಈ ಸಂಬಂಧ ಕಸೂರಿ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಭಾರತ ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಗೆ ಪ್ರತಿಯಾಗಿ ನಾವು ವಾಯುಮಾರ್ಗದ ಮೂಲಕ ಯಶಸ್ವಿಯಾಗಿ ಪ್ರತಿದಾಳಿ ನಡೆಸಿದ್ದೇವೆ. 2008ರ ಮುಂಬೈ ದಾಳಿಯ ಭಯಾನಕತೆ ಇನ್ನೂ ನೆನಪಿನಲ್ಲಿದೆ. ಈ ವರ್ಷವೂ ಸಮುದ್ರ ಮಾರ್ಗ ಬಳಸಿಕೊಂಡು 26/11 ಮಾದರಿಯಲ್ಲೇ ಭಾರತದ ಮೇಲೆ ಮತ್ತೊಂದು ದಾಳಿ ನಡೆಸುವುದಾಗಿ ಕಸೂರಿ ಹೇಳಿದ್ದಾನೆ.
2025ರಲ್ಲಿ ಪಾಕಿಸ್ತಾನವು ವಾಯುಮಾರ್ಗದಲ್ಲಿ ಪ್ರಾಬಲ್ಯ ಸಾಧಿಸಿದೆ. 2026ರಲ್ಲಿ ಸಮುದ್ರ ಮಾರ್ಗದಲ್ಲೂ ಪ್ರಾಬಲ್ಯ ಸಾಧಿಸುತ್ತದೆ. ಭೂಮಿ, ಆಕಾಶ ಅಥವಾ ಸಮುದ್ರದಲ್ಲಿ ಶತ್ರು ರಾಷ್ಟ್ರ ಭಾರತಕ್ಕೆ ಯಾವುದೇ ಸ್ಥಳ ಉಳಿಯುವುದಿಲ್ಲ. ‘ಅಲ್ಲಾ ಇಚ್ಛೆ’ಯಂತೆಯೇ ದಾಳಿ ನಡೆಸಲಾಗುತ್ತದೆ’ ಎಂದು ಕಸೂರಿ ಬೆದರಿಕೆ ಹಾಕಿದ್ದಾನೆ.
2008ರ ನವೆಂಬರ್ 26ರಂದು ಲಷ್ಕರ್–ಎ–ತಯಬಾ ಸಂಘಟನೆಗೆ ಸೇರಿದ 10 ಪಾಕಿಸ್ತಾನಿ ಉಗ್ರರು ಸಮುದ್ರದ ಮೂಲಕ ಕರಾಚಿಯಿಂದ ದೋಣಿಯಲ್ಲಿ ಆಗಮಿಸಿ ಮುಂಬೈ ನಗರಕ್ಕೆ ನುಸುಳಿದ್ದರು. ನಗರದ ಹೃದಯ ಭಾಗದಲ್ಲಿರುವ ಛತ್ರಪತಿ ಶಿವಾಜಿ ರೈಲ್ವೆ ಟರ್ಮಿನಲ್, ತಾಜ್‌ಮಹಲ್ ಹೋಟೆಲ್, ಟ್ರೈಡೆಂಟ್ ಹೋಟೆಲ್ ಮತ್ತು ಯಹೂದಿ ಕೇಂದ್ರಗಳ ಮೇಲೆ ಈ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಿಂದ 10 ದೇಶಗಳ 28 ವಿದೇಶಿಯರು ಸೇರಿದಂತೆ 166 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು.
ಒಂಬತ್ತು ಉಗ್ರರನ್ನು ಕಮಾಂಡೊ ಪಡೆಗಳ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಲಾಗಿತ್ತು. ಅಜ್ಮಲ್ ಕಸಾಬ್ ನನ್ನು ಜೀವಂತವಾಗಿ ಸೆರೆ ಹಿಡಿಯಲಾಗಿತ್ತು.