2026-03-07 02:22:29

no vision in siddaramaiah budget;vijayendra Speed News Kannada

 no vision in siddaramaiah budget;vijayendra  Speed News Kannada

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿದ ಬಜೆಟ್ ರಾಜ್ಯದ ಜನತೆಗೆ ನಿರಾಶೆ ಉಂಟು ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಬಜೆಟ್ ಓದಲು ಆರಂಭಿಸಿದಾಗ ಅದನ್ನು ಕೇಳುತ್ತಿದ್ದರೆ ಯಾರೋ ಸಾಹಿತಿಗಳು ಬರೆದುಕೊಟ್ಟಂತಿತ್ತು. ಕೇಳುವುದಕ್ಕೆ ತುಂಬಾ ಚೆನ್ನಾಗಿತ್ತು. ಓದಲೂ ಚೆನ್ನಾಗಿದೆ ಅನಿಸಿರಬಹುದು. ಆದರೆ, ರಾಜ್ಯದ ಜನತೆಗೆ ಯಾವುದೇ ಪ್ರಯೋಜನ ಆಗಿಲ್ಲ. ತಮ್ಮ 17ನೇ ಬಜೆಟ್ ಮೂಲಕ ನಾಡಿನ ಜನತೆಗೆ ಚೊಂಬನ್ನು ನೀಡಿದ್ದಾರೆ ಎಂದರು.

ಕಳೆದ 3 ವರ್ಷಗಳಲ್ಲಿ 4 ಲಕ್ಷ 39 ಸಾವಿರ ಕೋಟಿ ರೂ. ಸಾಲ ಮಾಡಿದ್ದೇ ಸಿದ್ದರಾಮಯ್ಯನವರ ದಾಖಲೆ. ಒಬ್ಬ ಅನುಭವಿ ಮುಖ್ಯಮಂತ್ರಿಯಾಗಿ 17ನೇ ಬಜೆಟ್ ಮಂಡಿಸುವ ಸುವರ್ಣಾವಕಾಶ ಅವರಿಗೆ ಸಿಕ್ಕಿತ್ತು.ಆದರೆ ಅವರು ನೀರಿನಲ್ಲಿ ಹೋಮ ಮಾಡುವ ಕೆಲಸವನ್ನು ಮಾಡಿದ್ದಾರೆ. ಯಾವುದೇ ದೂರದೃಷ್ಟಿ ಇಲ್ಲದ ನೀರಸ ಬಜೆಟ್ ಇದಾಗಿತ್ತು. ಮುಖ್ಯಮಂತ್ರಿಯವರು ಬಜೆಟ್ ಓದುವಾಗ ನಾನು ಆಡಳಿತ ಪಕ್ಷದ ಶಾಸಕರನ್ನು ಗಮನಿಸುತ್ತಿದ್ದೆ. ಯಾವುದೇ ಶಾಸಕರಲ್ಲಿ ಈ ಬಜೆಟ್ ಬಗ್ಗೆ ಆಸಕ್ತಿ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು ಎಂದರು.

ಆದ್ಯತಾ ರಂಗ ಎನಿಸಿದ ಶಿಕ್ಷಣ ಕ್ಷೇತ್ರಕ್ಕೆ ಕಳೆದ ಬಾರಿಗಿಂತ ಅನುದಾನ ಕಡಿಮೆ ನೀಡಲಾಗಿದೆ. ಯಾವುದೇ ಆದ್ಯತಾ ರಂಗಕ್ಕೆ ಆದ್ಯತೆ ನೀಡಿಲ್ಲ. ಬಂಡವಾಳ ಹೂಡಿಕೆಗೆ ಆದ್ಯತೆ ಕೊಟ್ಟಿಲ್ಲ. ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಈ ಬಜೆಟ್ ಮಂಡಿಸಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ರೈತರ ಬಗ್ಗೆಯೂ ಯಾವುದೇ ಕಾಳಜಿ ತೋರಿಲ್ಲ. ಯುವಜನತೆಗೆ ಆದ್ಯತೆ ಕೊಡುತ್ತಾರೆ; ಉದ್ಯೋಗ ಅವಕಾಶಕ್ಕೆ ಪೂರಕ ಬಜೆಟ್ ಕೊಡುವ ನಿರೀಕ್ಷೆ ಇತ್ತು. ಅದಕ್ಕೆ ಅವಕಾಶ ನೀಡಿಲ್ಲ; ತಮ್ಮ ಪಂಚ ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಸಾಧ್ಯ ಆಗದೇ ಪದೇಪದೇ ಅಬಕಾರಿ ಇಲಾಖೆ ಮೇಲೆ ಇವರು ಅವಲಂಬಿತರಾಗಿದ್ದಾರೆ ಎಂದು ದೂರಿದರು.

ಕುಡುಕರ ರಾಜ್ಯ ಮಾಡುತ್ತಿದ್ದಾರೆ:

ಈ ಬಾರಿಯೂ 45 ಸಾವಿರ ಕೋಟಿ ರೂ. ಗಳನ್ನು ಮುಖ್ಯಮಂತ್ರಿಗಳು ಅಬಕಾರಿ ಇಲಾಖೆಯಿಂದ ನಿರೀಕ್ಷೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯವನ್ನು ಕುಡುಕರ ರಾಜ್ಯವಾಗಿ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲೆಗೂ ಯಾವುದೇ ಕೊಡುಗೆ ಕೊಟ್ಟಿಲ್ಲ. ಕರಾವಳಿ ಭಾಗ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಸೇರಿ ಇಡೀ ಕರ್ನಾಟಕದ ಅಭಿವೃದ್ಧಿಯ ದೃಷ್ಟಿಕೋನ ಇಲ್ಲದ ಬಜೆಟ್ ಇದಾಗಿದೆ ಎಂದು ತಿಳಿಸಿದರು.

 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.