2026-03-07 03:03:49

Mysore Sandal Soap launches | ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಪ್ರಚಾರ ಆರಂಭ | Speed News kannada

Mysore Sandal Soap launches | ಮೈಸೂರು ಸ್ಯಾಂಡಲ್‌ ಸೋಪ್‌ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಪ್ರಚಾರ ಆರಂಭ | Speed News kannada

ಬೆಂಗಳೂರು: ಸರಕಾರಿ ಸ್ವಾಮ್ಯದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆ.ಎಸ್‌‍.ಡಿ.ಎಲ್‌) ತಯಾರಿಸುವ ಉತ್ಪನ್ನಗಳ ರಾಯಭಾರಿಯಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ಪ್ರಚಾರ ಆರಂಭಿಸಿದ್ದಾರೆ. 
ಮಾರುಕಟ್ಟೆ ಬಲವರ್ಧನೆಯ ಅಂಗವಾಗಿ ಖ್ಯಾತ ಹಿಂದಿ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಗೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಅವರು ಇಂದಿನಿಂದ ವಿದ್ಯುಕ್ತ ರಾಯಭಾರಿಯಾಗಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಜರುಗಿದ ಸಮಾರಂಭದಲ್ಲಿ ಸಚಿವರು ಖ್ಯಾತ ಚಿತ್ರನಟಿ ತಮನ್ನಾ ಭಾಟಿಯಾ ಅವರನ್ನು ಪರಿಚಯಿಸಿದರು. ನಂತರ ಮೈಸೂರು ಸ್ಯಾಂಡಲ್ ಸೋಪ್ ಬೆಳೆದು ಬಂದ ಹಾದಿಯನ್ನು ಬಿಂಬಿಸುವ ಸುಗಂಧ ಸಿರಿ ಹೊತ್ತಗೆಯನ್ನು ಬಿಡುಗಡೆ ಮಾಡಲಾಯಿತು. 
ನಂತರ ಮಾತನಾಡಿ ಅವರು ಕೆ.ಎಸ್‌‍.ಡಿ.ಎಲ್‌ನ ವಹಿವಾಟನ್ನು 2030ರ ಹೊತ್ತಿಗೆ 5,000 ಕೋಟಿ ರೂ.ಗಳ ಮಟ್ಟಕ್ಕೆ ಬೆಳೆಸುವ ಗುರಿ ಹೊಂದಲಾಗಿದೆ. ಉತ್ತರ ಭಾರತ, ಅಮೇರಿಕ, ಮಧ್ಯಪ್ರಾಚ್ಯಗಳಲ್ಲೂ ಮೈಸೂರು ಸ್ಯಾಂಡಲ್‌ ಸೋಪ್‌ ಸಹಿತ ಸಂಸ್ಥೆಯ ಉತ್ಪನ್ನಗಳನ್ನು ಮಾರುಕಟ್ಟೆಯ ಅವಕಾಶ ಸೃಷ್ಟಿಸಿಕೊಳ್ಳುವ ಉದ್ದೇಶವಿದ್ದು, ಸೋಷಿಯಲ್‌ ಮೀಡಿಯಾದಲ್ಲಿ 30 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು  ಹೊಂದಿರುವ ತಮನ್ನಾ ಅವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಉತ್ಕೃಷ್ಟ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಪ್ರಚಾರ ರಾಯಭಾರಿಯಾಗಿರುವ ತಮನ್ನಾ ಅವರು ಉತ್ಪನ್ನಗಳ ಪ್ರಸಾರ ಜಾಹೀರಾತು, ಕಾರ್ಯಕ್ರಮಗಲ್ಲಿ ಮುಂದಿನ 2 ವರ್ಷಗಳ ಕಾಲ ಕಾಣಿಸಿಕೊಳ್ಳಲಿದ್ದಾರೆ. 
ಕೆ.ಎಸ್‌‍.ಡಿ.ಎಲ್‌ನ ಸ್ಯಾಂಡಲ್‌ ಸೋಪ್‌, ಶವರ್‌ ಜೆಲ್‌, ಟಾಲ್ಕಂ ಪೌಡರ್‌, ಹ್ಯಾಂಡ್‌ವಾಶ್‌, ಅಗರಬತ್ತಿ, ಸಾಂಬ್ರಾಣಿ, ಧೂಪ, ಮಿಲೆನಿಯಂ ಸೋಪ್‌, ಮುಂತಾದವುಗಳಿಗೆ ಅಪಾರ ಬೇಡಿಕೆ ಇದೆ. ವಿಜಯಪುರ ಜಿಲ್ಲೆಯಲ್ಲಿ ಮತ್ತು ಡಾಬಸ್‌‍ಪೇಟೆಯ ಕೈಗಾರಿಕಾ ಪ್ರದೇಶಗಳಲ್ಲಿ ಸಂಸ್ಥೆಯ ಉತ್ಪಾದನಾ ಘಟಕಗಳನ್ನು ಆರಂಭಿಸಲಾಗುವುದು ಎಂದೂ ತಿಳಿಸಿದರು.
ಮೈಸೂರು ಜಾಸ್ಮಿನ್ ಸೋಪ್ ಗೆ ಕೂಡ ಕಾಯಕಲ್ಪ ನೀಡಿ, ಬಹುದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಮಾಡಲು ಚಿಂತನೆ ನಡೆಸಲಾಗಿದೆ. ಇಂದು ಹಲವಷ್ಟು ಉತ್ಪನ್ನಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ನೂತನ ಯೋಜನೆಗಳನ್ನು ಸಹ ಹಂಚಿಕೊಳ್ಳಲಾಯಿತು. 
ಮುದ್ದೇಬಿಹಾಳದ ಶಾಸಕರು ಹಾಗೂ KSDL ಅಧ್ಯಕ್ಷ ಸಿ.ಎಸ್‌‍ ಅಪ್ಪಾಜಿ ನಾಡಗೌಡ, ಕೈಗಾರಿಕಾ ಇಲಾಖೆ, KSDL, MSIL ಅಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರು ಇಂದಿನ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.