ಶಿವಮೊಗ್ಗ: ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ, ಗ್ರಾಮ ಸೇವಕರು ಮನೆ ಬಾಗಿಲಿಗೆ ಬಂದು ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳನ್ನು ಅವರ ವಾರಸುದಾರರ ಹೆಸರಿಗೆ ಪೌತಿ ಖಾತೆ ಮಾಡಿಕೊಡುವ ಅಭಿಯಾನ ಕೈಗೊಂಡಿದ್ದು ವಾರಸುದಾರರು ಇದಕ್ಕೆ ಸಹಕರಿಸಬೇಕೆಂದು ಕಂದಾಯ ಸಚಿವರಾದ ಕೃಷ್ಣ ಭೈರೇಗೌಡರು ಮನವಿ ಮಾಡಿದ್ದಾರೆ.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇ-ಪೌತಿ ಖಾತೆ ಮಾಡಿಸುವ ಸಂಬಂಧ ವಿಎಓ ಗಳು ವಾರಸುದಾರರನ್ನು ಗುರುತು ಮಾಡಿ ವಿವರಗಳನ್ನು ಪಡೆದು ಕ್ರಮ ಕೈಗೊಳ್ಳಬೇಕು. ಓಟಿಪಿ ಸಮಸ್ಯೆ, ಕೋರ್ಟ್ ವ್ಯಾಜ್ಯ, ಹೆಣ್ಣು ಮಕ್ಕಳಿಗೆ ಆಸ್ತಿ ಕೊಡಬೇಕಾಗುತ್ತದೆಂದು ವಾರಸುದಾರರು ಮಾಹಿತಿ ನೀಡುತ್ತಿಲ್ಲ, ಎರಡು, ಮೂರು ತಲೆಮಾರಗಳ ಪ್ರಕರಣಗಳು ಕಷ್ಟ ಎಂಬ ಸಾಮಾನ್ಯ ಕಾರಣ ನೀಡದೇ ಪ್ರತಿ ಪ್ರಕರಣದಲ್ಲಿ ನಿಖರವಾದ ಕಾರಣ ತಿಳಿದು, ವಾರಸುದಾರರ ಮನವೊಲಿಸಿ ಕ್ರಮ ವಹಿಸಬೇಕು. ಹಾಗೂ 2021 ರ ಸುತ್ತೋಲೆ ಪ್ರಕಾರ ಅಭಿಯಾನ ಮಾದರಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಿದರು.
ರಿಜಿಸ್ಟರ್ಡ್ ಸೇಲ್ ಡೀಡ್ ಇರುವುದನ್ನು ಬಿಟ್ಟು ಉಳಿದವರಿಗೆ ವಾಸಿಸುವ ಜಾಗಕ್ಕೆ ಹಕ್ಕು ಪತ್ರ ನೀಡಬೇಕು. 4000 ಅಡಿಗೆ ಒಂದು ಟೈಟಲ್ ಸಿಗುತ್ತದೆ. ಹಕ್ಕುಪತ್ರ ನೀಡುವುದರಿಂದ ವಾಸಿಸುವ ಮನೆಯಾದ್ರೂ ಸ್ವಂತ ಆಗುತ್ತದೆ. ಅಧಿಕಾರಿಗಳು ಕಾನೂನಿನಲ್ಲಿ ಅವಕಾಶ ಇರುವುದನ್ನು ಮಾಡಿಕೊಡಬೇಕು. ಅರ್ಹರನ್ನು ಗುರುತಿಸಿ ಮಾರ್ಚ್ 16 ರೊಳಗೆ ಹಕ್ಕುಪತ್ರ ನೀಡಲು ಕ್ರಮವಹಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಈ ಮೂಲಕ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದರು.
ಮೋಜಿನಿ ವರದಿ: ಮೋಜಿನಿ ಸರ್ವೆಗಾಗಿ 19462 ಅರ್ಜಿಗಳು ಬಂದಿದ್ದು, ಸರ್ವೇ ಇಲಾಖೆಯಲ್ಲಿ 10525 ಬಾಕಿ, ತಹಶಿಲ್ದಾರ್/ಎಸಿ ಕಚೇರಿಯಲ್ಲಿ 7032 ಬಾಕಿ ಸೇರಿದಂತೆ 13557 ಬಾಕಿ ಇದೆ. ಲಭ್ಯವಿರುವ ಸರ್ವೇಯರ್‌ಗಳು, ರೋವರ್‌ಗಳನ್ನು ಬಳಸಿಕೊಂಡು ಸಕಾಲಿಕವಾಗಿ ಸರ್ವೇ ಮಾಡಲು ಕ್ರಮ ವಹಿಸಬೇಕು. ಇಲಾಖೆ ಅಧಿಕಾರಿ, ನೌಕರರು ಆಸಕ್ತಿಯಿಂದ ಬಡವರ ಪರವಾಗಿ ಕೆಲಸ ಮಾಡಬೇಕು ಎಂದರು.
ರೆವೆನ್ಯು ನಿವೇಶನಗಳಿಗೆ ಬಿ-ಖಾತೆ ನೀಡಬೇಕು. ಈ ಕುರಿತು ಅರಿವಿನ ಕೊರತೆ ಇದ್ದು ಅರಿವನ್ನು ಹೆಚ್ಚಿಸಬೇಕು. ಇಲ್ಲವಾದಲ್ಲಿ ಆಸ್ತಿ ವ್ಯವಹಾರಗಳಿಗೆ ಕಷ್ಟವಾಗುತ್ತದೆ. ಹಳೇ ಆಸ್ತಿಗಳಿಗೆ ಇಸ್ವತ್ತು ಸಿಗುತ್ತಿಲ್ಲ. ಆದ್ದರಿಂದ ಡಿಸಿ, ಸಿಇಓ, ಗಳು ಜನರಿಗೆ ತೊಂದರೆಯಾಗದಂತಮ ಅಂತಹ ಪ್ರಕರಣಗಳ ಕುರಿತು ಸೂಕ್ತ ಕ್ರಮ ವಹಿಸಬೇಕು ಎಂದು ತಿಳಿಸಿದರು.
ರಿಜಿಸ್ಟರ್ಡ್ ಸೇಲ್ ಡೀಡ್ ಇಲ್ಲದವರಿಗೆ ಕಂದಾಯ ಗ್ರಾಮ ರಚನೆ (ನಗರ ಸೇರಿ)ಮೂಲಕ ಮಾತ್ರ ಸಹಾಯ ಮಾಡಬಹುದು. ಇಲ್ಲವಾದಲ್ಲಿ ಅವರಿಗೆ ತ್ರಿಶಂಕು ಪರಿಸ್ಥಿತಿ ಉಂಟಾಗುತ್ತದೆ. ಅದೂ ಕೂಡ ಮಾರ್ಚ್ 16 ರೊಳಗೆ ಮಾಡಬೇಕು ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಪ್ರೊಬೊಷನರಿ ಐಎಎಸ್ ಅಧಿಕಾರಿ ನಾಗೇಂದ್ರ ಬಾಬು, ಜಿ.ಪಂ ಉಪ ಕಾರ್ಯದರ್ಶಿ ಸುಜಾತಾ, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ, ಎಸಿ ಗಳು, ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಎಓ ಗಳು ಪಾಲ್ಗೊಂಡಿದ್ದರು.