2026-03-07 02:59:34

KV Prabhakar | ಸಿನಿಮಾಗಳು ಕನ್ನಡ ಸಾಹಿತ್ಯ, ಸಂಸ್ಕೃತಿಯಿಂದ ವಿಮುಖವಾಗಿವೆ: ಹೀಗಾಗಿ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ: ಕೆ.ವಿ.ಪ್ರಭಾಕರ್ | SNK

KV Prabhakar | ಸಿನಿಮಾಗಳು ಕನ್ನಡ ಸಾಹಿತ್ಯ, ಸಂಸ್ಕೃತಿಯಿಂದ ವಿಮುಖವಾಗಿವೆ: ಹೀಗಾಗಿ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ: ಕೆ.ವಿ.ಪ್ರಭಾಕರ್ | SNK

ಬೆಂಗಳೂರು: ಸಿನಿಮಾಗಳು ಕನ್ನಡ ಸಾಹಿತ್ಯ-ಸಂಸ್ಕೃತಿಯ ಬೇರುಗಳಿಂದ ದೂರ ಆಗಿರುವುದರಿಂದಲೇ ಜನರೂ ಕನ್ನಡ ಸಿನಿಮಾಗಳಿಂದ ದೂರವಾಗಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು. 
17ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ "ಕನ್ನಡ ಸಿನಿ‌ ಪಯಣದ 50 ವರ್ಷಗಳ ಸುವರ್ಣ ಸಂಭ್ರಮ" ದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 
ಹಿಂದೆಲ್ಲಾ ಸಿನಿಮಾಗಳು, ಸಿನಿಮಾದ ಪಾತ್ರಗಳು ನಮ್ಮ ಬದುಕಿನ‌ ಭಾಗ ಆಗಿರುತ್ತಿದ್ದವು. ಹೀಗಾಗಿ ಜನರು ಕನ್ನಡ ಸಿನಿಮಾಗಳಿಗೆ ಮುಗಿ ಬೀಳುತ್ತಿದ್ದರು. ಆಗ ಯಾವ ಹೀರೋಗಳೂ ಇವತ್ತಿನ ಹೀರೋಗಳಂತೆ ನಮ್ಮ ಸಿನಿಮಾ ನೋಡಿ ಎಂದು ಗೋಗರೆಯುತ್ತಿರಲಿಲ್ಲ. ಹಿಂದಣ ಹೆಜ್ಜೆಯನ್ನರಿಯದವನು ಮುಂದಣ ಹೆಜ್ಜೆಯನ್ನಿಡಲಾರನು ಎಂದರು. 
ಈಗ ಒಂದು ಸಿನಿಮಾ ತೆರೆ ಕಾಣುತ್ತಿದ್ದಂತೆ ನಾಯಕ ನಟರು ಅವರವರೇ ಸ್ವಘೋಷಿತ ಸ್ಟಾರ್ ಗಳಾಗಿ ಬಿಡುತ್ತಾರೆ. ಇವೆಲ್ಲವೂ ನಮ್ಮ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬೇರುಗಳಿಂದ ಬೇರ್ಪಟ್ಟಿದ್ದರ ದುಷ್ಪರಿಣಾಮ ಎಂದು ಬೇಸರ ವ್ಯಕ್ತಪಡಿಸಿದರು.
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಸಿನಿ ಪಯಣದ ಸುವರ್ಣ ಸಂಭ್ರಮ‌"ಕ್ಕಾಗಿ ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಅರ್ಥಪೂರ್ಣ ಸಂಗತಿ. 50 ವರ್ಷಗಳ ಕನ್ನಡ ಸಿನಿಮಾ ಪಯಣವನ್ನು ಮೆಲುಕು ಹಾಕುತ್ತಲೇ, ಈ 50 ವರ್ಷಗಳಲ್ಲಿ ಕನ್ನಡ ಸಿನಿಮಾ ಪರಂಪರೆಯನ್ನು ಗಟ್ಟಿಗೊಳಿಸಿದ ಐದು ಮಂದಿ ಹಿರಿಯರನ್ನು ಗುರುತಿಸಿದ್ದೇವೆ.
ಪಾರ್ವತಮ್ಮ ರಾಜ್ ಕುಮಾರ್ , ಎಸ್. ರಾಮಚಂದ್ರ, ಗಿರೀಶ್ ಕಾಸರವಳ್ಳಿ, ಎಸ್.ವಿ.ರಾಜೇಂದ್ರಸಿಂಗ್ ಬಾಬು, ಡಾ.ಜಯಮಾಲ ಅವರ ಕೊಡುಗೆಗಳನ್ನು ನಾವು ಗುರುತಿಸುತ್ತಿದ್ದೇವೆ. ಈ ಐದು ಮಂದಿಯ ಸಾಧನೆಗಳನ್ನು ಮೆಲುಕು ಹಾಕುವುದೆಂದರೆ ಇಡೀ ಕನ್ನಡ ಸಿನಿಮಾ ಪರಂಪರೆಯ ಅರ್ಧ ಶತಮಾನವನ್ನು ಹಿಂದಿರುಗಿ ನೋಡಿದಂತೆ ಎಂದರು..

ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆ ಡಾ.ಜಯಮಲಾ ಅವರು ಮುಂದಿಟ್ಟ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಇರುವವರೆಗೆ ಸಬ್ಸಿಡಿ ನಿಲ್ಲುವುದಿಲ್ಲ ಎಂದು ಖಚಿತವಾಗಿ ನುಡಿದರು. ವಾಣಿಜ್ಯ ಮಂಡಳಿ ಮುಂದಿಟ್ಟಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಇದೇ ಸಂದರ್ಭದಲ್ಲಿ‌ ಭರವಸೆ ನೀಡಿದರು.
ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಸಿಂಗ್ ಬಾಬು, ಪೂರ್ಣಿಮಾ ವಿನಯ್ ರಾಜ್ ಕುಮಾರ್, ಜಯಮಾಲಾ, ಚಲನಚಿತ್ರ ಅಕಾಡೆಮಿ‌ ಅಧ್ಯಕ್ಷರಾದ ಸಾಧು ಕೋಕಿಲಾ, ಹಿರಿಯ ಪತ್ರಕರ್ತರಾದ ಗಂಗಾಧರ ಮೊದಲಿಯಾರ್ ಅವರುಗಳು ಉಪಸ್ಥಿತರಿದ್ದರು

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.