ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನಡೆಸುವ ವಿಚಾರವಾಗಿ ಕೆಎಸ್‌ಸಿಎ ಹಾಗೂ ಆರ್‌ಸಿಬಿ ಪದಾಧಿಕಾರಿಗಳ ನಿಯೋಗವು ಇಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಸಭೆಯ ನಂತರ ಮಾತನಾಡಿದ ಸಚಿವರು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಗತ್ಯ ಸುರಕ್ಷತೆ ಕೈಗೊಳ್ಳುವ ಕುರಿತಂತೆ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರ ವರದಿಯ ಶಿಫಾರಸುಗಳು ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಪೂರ್ಣಗೊಳಿಸುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಮಾಲೋಚನೆ ನಡೆಸಲಾಯಿತು. ಫೆಬ್ರವರಿ 12ರಂದು ಸಭೆ ನಡೆಸಿ, ಮುಖ್ಯಮಂತ್ರಿಗಳ ಜತೆಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೆಎಸ್‌ಸಿಎ ಅಧ್ಯಕ್ಷರಾದ ವೆಂಕಟೇಶ್ ಪ್ರಸಾದ್, ಪದಾಧಿಕಾರಿ ವಿನಯ್ ಮೃತ್ಯುಂಜಯ, ಆರ್‌ಸಿಬಿ ರಾಜೇಶ್ ಮೆನನ್ ಹಾಗೂ ಕೆಎಸ್‌ಸಿಎ ಹಾಗೂ ಆರ್‌ಸಿಬಿ ಪದಾಧಿಕಾರಿಗಳು ಇದ್ದರು. ಒಟ್ಟಾರೆ ಇದುವರೆಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಕ್ರಿಕೆಟ್ ಪಂದ್ಯ ನಡೆಸುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.