2026-03-07 01:02:22

Karnataka Bank service deficient complaint | ಕರ್ನಾಟಕ ಬ್ಯಾಂಕ್ ಸೇವಾ ನ್ಯೂನ್ಯತೆ ದೂರು ಪರಿಹಾರ ನೀಡಲು ಆಯೋಗದಿಂದ ಆದೇಶ | Speed News Kannada

Karnataka Bank service deficient complaint | ಕರ್ನಾಟಕ ಬ್ಯಾಂಕ್ ಸೇವಾ ನ್ಯೂನ್ಯತೆ ದೂರು ಪರಿಹಾರ ನೀಡಲು ಆಯೋಗದಿಂದ ಆದೇಶ | Speed News Kannada

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಕಾಚಿನಕಟ್ಟೆ ನಾಗರಾಜ್ ಬಿ.ಎಂ. ಎಂಬುವವರು ಸಂತೇ ಕಡೂರು ಕೆನರಾ ಬ್ಯಾಂಕ್ ಶಾಖೆ, ಮಲ್ಲಿಗೆನಹಳ್ಳಿ ಲೀಡ್ ಬ್ಯಾಂಕ್ ಚೇರ್‌ಮನ್ ಮತ್ತು ಶಿವಮೊಗ್ಗ ಗೋಪಿಸರ್ಕಲ್ ಕರ್ನಾಟಕ ಬ್ಯಾಂಕ್ ಮೇನ್ ಬ್ರಾಂಚ್ ವ್ಯವಸ್ಥಾಪಕರು ಇವರುಗಳ ವಿರುದ್ಧ ಕರ್ನಾಟಕ ಬ್ಯಾಂಕ್‌ ರೂ.5.50 ಲಕ್ಷ ಚೆಕ್‌ನ್ನು ಕೆನರಾ ಬ್ಯಾಂಕ್‌ಗೆ ಸಲ್ಲಿಸಿದ್ದು, ಖಾತೆಯಲ್ಲಿ ರೂ. 55,000 ಗಳನ್ನು ಮಾತ್ರ ಜಮಾ ಮಾಡಿ ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ವಕೀಲರ ಮೂಲಕ ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ.
ದೂರುದಾರರು 2024ರ ಜುಲೈನಲ್ಲಿ ಕೆನರಾ ಬ್ಯಾಂಕ್‌ನ ತಮ್ಮ ಖಾತೆಗೆ ರೂ.5.50 ಲಕ್ಷ ಮೊತ್ತ ಕರ್ನಾಟಕ ಬ್ಯಾಂಕ್ ಚೆಕ್‌ನ್ನು ವರ್ಗಾವಣೆಗಾಗಿ ಸಲ್ಲಿಸಿದ್ದು, ಖಾತೆಯಲ್ಲಿ ರೂ. 55,000/- ಗಳನ್ನು ಮಾತ್ರ ಜಮಾ ಮಾಡಿರುತ್ತಾರೆ. ಈ ಕುರಿತು ಅನೇಕ ಸಲ ಪತ್ರ ವ್ಯವಹಾರ ಮಾಡಿ ಉಳಿದ ಮೊತ್ತ 4,95,000/-ಗಳನ್ನು ಜಮಾ ಮಾಡುವಂತೆ ಕೇಳಿಕೊಂಡರೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ.
ಆಯೋಗವು ದೂರನ್ನು ದಾಖಲಿಸಿಕೊಂಡು ಮೂರು ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ತಮ್ಮ ವಕೀಲರ ಮೂಲಕ ಹಾಜರಾಗಿ ಕೆನರಾ ಬ್ಯಾಂಕ್ ತಮ್ಮ ತಕರಾರಿನಲ್ಲಿ ದೂರುದಾರರ ಚೆಕ್‌ನ್ನು ಕರ್ನಾಟಕ ಬ್ಯಾಂಕ್ ಶಾಖೆಗೆ ಚೆಕ್ ಮೊತ್ತವನ್ನು ಕಳುಹಿಸಲು ಸಲ್ಲಿಸಿದ್ದು, ಅಲ್ಲಿಂದ ರೂ. 55,000/- ಗಳನ್ನು ಮಾತ್ರ ಕಳುಹಿಸಿರುತ್ತಾರೆ. ಉಳಿಕೆ ವ್ಯತ್ಯಾಸದ ಮೊತ್ತವನ್ನು ಕಳುಹಿಸಲು ಪತ್ರ ಸಲ್ಲಿಸಿರುತ್ತೇವೆ. ಆದ್ದರಿಂದ ಕೆನರಾ ಬ್ಯಾಂಕ್‌ನಿಂದ ಯಾವುದೇ ಸೇವಾ ನ್ಯೂನ್ಯತೆಯಾಗಿರುವುದಿಲ್ಲ ಎಂದು ಹೇಳಿರುತ್ತಾರೆ.ಆಯೋಗವು ದೂರುದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಪರಿಶೀಲಿಸಿ, ದೂರುದಾರರ ವಾದವನ್ನು ಆಲಿಸಿ, ಎದುರುದಾರರು ಚೆಕ್‌ ಪೂರ್ಣ ಮೊತ್ತವನ್ನು ಖಾತೆಗೆ ಜಮಾ ಮಾಡದೆ ಸೇವಾ ನ್ಯೂನ್ಯತೆ ಎಸಗಿರುತ್ತಾರೆ ಎಂದು ತೀರ್ಮಾನಿಸಿ, ದೂರನ್ನು ಭಾಗಶಃ ಪುರಸ್ಕರಿಸಿ, ಎದುರುದಾರರು ಕರ್ನಾಟಕ ಬ್ಯಾಂಕ್ ದೂರುದಾರರಿಗೆ ಚೆಕ್ ಅನ್ವಯದ ವ್ಯತ್ಯಾಸದ ಮೊತ್ತ ರೂ. 4,95,000/- ದಿ:21/02/2025ರಿಂದ ವಾರ್ಷಿಕ ಶೇ. 6ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣವನ್ನು ಈ ಆದೇಶವಾದ 45 ದಿನಗಳೊಳಗಾಗಿ ಪಾವತಿಸುವಂತೆ, ತಪ್ಪಿದ್ದಲ್ಲಿ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಹಾಗೂ ರೂ. 25,000/-ಗಳನ್ನು ಮಾನಸಿಕ ಹಿಂಸೆ ಮತ್ತು ದೂರಿನ ಖರ್ಚು ವೆಚ್ಚಕ್ಕಾಗಿ ಈ ಆದೇಶವಾದ 45 ದಿನಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ತಪ್ಪಿದ್ದಲ್ಲಿ ವಾರ್ಷಿಕ ಶೇ. 9ರ ಬಡ್ಡಿಯನ್ನು ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಇವರನ್ನೊಳಗೊಂಡ ಪೀಠವು ಫೆ.12 ರಂದು ಆದೇಶಿಸಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ ಎಂ.ಟಿ. ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.