2026-03-07 01:42:07

Non Resident Ministry not announced in the budget | ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ ಅನಿವಾಸಿ ಕನ್ನಡಿಗರ ಬೇಸರ | Speed News Kannada

Non Resident Ministry not announced in the budget | ಬಜೆಟ್ ನಲ್ಲಿ ಘೋಷಣೆಯಾಗದ ಅನಿವಾಸಿ ಸಚಿವಾಲಯ ಅನಿವಾಸಿ ಕನ್ನಡಿಗರ ಬೇಸರ | Speed News Kannada

ದುಬೈ: ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಕರ್ನಾಟಕ ಬಜೆಟ್-2026ರಲ್ಲಿ ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಯಾಗಿರುವ 'ಪ್ರತ್ಯೇಕ ಸಚಿವಾಲಯ' ಘೋಷಣೆ ಮಾಡದಿರುವುದು ನಿರಾಸೆಯನ್ನುಂಟು ಮಾಡಿದೆ ಎಂದು ಅನಿವಾಸಿ ಉದ್ಯಮಿ ಡಾ.ರೋನಾಲ್ಡ್ ಕೊಲಾಸೊ ಬೇಸರ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 11ರಂದು ಬೆಳಗಾವಿ ಅಧಿವೇಶನದ ವೇಳೆ ಡಾ.ರೋನಾಲ್ಡ್ ಕೊಲಾಸೊ ನೇತೃತ್ವದಲ್ಲಿ ಸಿಎಂ-ಡಿಸಿಎಂ‌-ಗೃಹಸಚಿವರು, ಇತರ ಸಚಿವರು ಹಾಗೂ ವಿಪಕ್ಷ ನಾಯಕರನ್ನು ಭೇಟಿಯಾದ ಸುಮಾರು ಮೂವತ್ತಕ್ಕೂ ಹೆಚ್ಚು ದೇಶಗಳ 45 ಮಂದಿ ಕನ್ನಡಿಗ ಪ್ರತಿನಿಧಿಗಳ NRI ನಿಯೋಗವು 'ಪ್ರತ್ಯೇಕ ಸಚಿವಾಲಯ'ಕ್ಕಾಗಿ ಬೇಡಿಕೆಯ ಮನವಿ ಸಲ್ಲಿಸಿತ್ತು.
 ಈ ವೇಳೆ ಖುದ್ದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗು ಇತರ ಸಚಿವರು 'ಪ್ರತ್ಯೇಕ ಸಚಿವಾಲಯ'ವನ್ನು ಶೀಘ್ರವೇ ಮಾಡುವ ಭರವಸೆ ನೀಡಿದ್ದರು. ಹಾಗಾಗಿ ಅನಿವಾಸಿ ಕನ್ನಡಿಗರ ಈ ಬಹುಕಾಲದ ಬೇಡಿಕೆ ಕೊನೆಗೂ ಈಡೇರುವ ನಿರೀಕ್ಷೆ ಇತ್ತು .ಆದರೆ ಈ ಬಾರಿಯ ಕರ್ನಾಟಕ ಬಜೆಟ್-2026ನಲ್ಲಿ ಯಾವುದೇ ರೀತಿಯ ಘೋಷಣೆ ಆಗಲಿ, ಉಲ್ಲೇಖವಾಗಲಿ ಮಾಡದಿರುವುದಕ್ಕೆ ಡಾ.ರೋನಾಲ್ಡ್ ಕೊಲಾಸೊ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಅನಿವಾಸಿ ಕನ್ನಡಿಗರಿಗಾಗಿ ನೀಡಿರುವ ಇನ್ನೊಂದು ಗ್ಯಾರಂಟಿಯಾದ ಅನಿವಾಸಿ ಕನ್ನಡಿಗರು ಕರ್ನಾಟಕದಲ್ಲಿ ಉದ್ಯಮ ನಡೆಸಲು ಉತ್ತೇಜನ ನೀಡುವ ಉದ್ದೇಶದಿಂದ 1 ಸಾವಿರ ಕೋಟಿ ರೂ. ಆವರ್ತನ ನಿಧಿ ಸ್ಥಾಪಿಸುವುದಾಗಿಯೂ ಭರವಸೆ ನೀಡಿದ್ದರು. ಅದರ ಬಗ್ಗೆಯೂ ಈ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪವಿಲ್ಲ. ಭರವಸೆಯು ಭರವಸೆಯಾಗಿಯೇ ಉಳಿದಿದೆ  ಎಂದು ಡಾ.ಕೊಲಾಸೊ ಹೇಳಿದ್ದಾರೆ.
ಕೇರಳದಲ್ಲಿ ಅಲ್ಲಿನ ಸರಕಾರ 'ಪ್ರತ್ಯೇಕ ಸಚಿವಾಲಯ' ಸ್ಥಾಪಿಸಿದೆ. ಇದರಿಂದ ಅಲ್ಲಿನ ಅನಿವಾಸಿಗಳಿಗೆ ಎಲ್ಲ ರೀತಿಯ ಸಹಾಯ, ಸಹಕಾರ ಸಿಗುತ್ತಿದೆ. ಜೊತೆಗೆ ಅಲ್ಲಿನ ಸರಕಾರಕ್ಕೂ ಹಲವು ರೀತಿಯ ಪ್ರಯೋಜನ, ಲಾಭ ಅನಿವಾಸಿಗಳಿಂದ ಸಿಗುತ್ತಿದೆ.
ಆವರ್ತನ ನಿಧಿ, 'ಪ್ರತ್ಯೇಕ ಸಚಿವಾಲಯ' ಸ್ಥಾಪನೆಯಿಂದ ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ಅನಿವಾಸಿ ಕನ್ನಡಿಗರ ಹೂಡಿಕೆ ಹೆಚ್ಚಲು, ನವೋದ್ಯಮಗಳಿಗೆ ಅಗತ್ಯವಾದ ಬಲ ಸಿಗಲು ಮತ್ತು ರಾಜ್ಯದಲ್ಲಿ ಉದ್ಯೋಗಾವಕಾಶ ವಿಸ್ತರಣೆಗಾಗಲು ನೆರವಾಗಲಿದೆ. ಜೊತೆಗೆ ವಿದೇಶದಿಂದ ವೃತ್ತಿಪರರು ರಾಜ್ಯಕ್ಕೆ ಮರಳಲು ಬೇಕಾದ ಆರ್ಥಿಕ ಮತ್ತು ಆಡಳಿತಾತ್ಮಕ ಭರವಸೆ ಒದಗಿಸಲಿದೆ ಎಂಬುದನ್ನು ನಾವು ನೀಡಿರುವ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.