ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಜೋ ಸೈಮನ್ ಅವರು ಹಠಾತ್ತನೆ ನಿಧನ ಹೊಂದಿದ್ದಾರೆ.
ಶಿವಾನಂದ ವೃತ್ತದಲಲಿರುವ ಕರ್ನಾಟಕ ಫಿಲಂ ಚೇಂಬರ್ ನಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಭಾಗಿಯಾಗಿದ್ದಾಗಲೇ ಜೋ ಸೈಮನ್ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆ ಉಸಿರೆಳೆದಿದ್ದಾರೆ.
ಜೋ ಸೈಮನ್ ಅವರಿಗೆ 80 ವರ್ಷ ವಯಸ್ಸಾಗಿತ್ತು. ಜೋ ಸೈಮನ್ ಅವರು ನಿರ್ದೇಶಕ, ನಟ, ಗೀತ ರಚನೆಕಾರನಾಗಿ ಗುರುತಿಸಿಕೊಂಡಿದ್ದರು.
1977 ರಲ್ಲಿ ನಿರ್ದೇಶನಕ್ಕೆ ಕಾಲಿಟ್ಟ ಜೋ ಸೈಮನ್ಅವರ ಚೊಚ್ಚಲ ಚಿತ್ರ ‘ಒಂದು ಪ್ರೇಮದ ಕತೆ’. ನಂತರ ಅವರು ಹಿಂತಿರುಗಿ ನೋಡೊದ್ದೇ ಇಲ್ಲ. ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದರು. ಆಕ್ಷನ್ ಮತ್ತು ಪ್ರೀತಿ ಪ್ರೇಮದ ಸಿನಿಮಾಗಳನ್ನು ನೀಡುವಲ್ಲಿ ಅವರದ್ದು ಎತ್ತಿದ ಕೈ. ‘ಸಿಂಹ ಜೋಡಿ’, ‘ಸಾಹಸ ಸಿಂಹ’, ‘ಹಾಂಕಾಂಗ್ನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’ ಇವರ ಸೂಪರ್ ಹಿಟ್ ಚಿತ್ರಗಳು.
ಜೋ ಸೈಮನ್ ಅವರು ನಿರ್ದೇಶನ, ನಟನೆ ಜತೆಗೆ ಕಲಾವಿದರಿಗೆ ಸಂಬಂಧಿಸಿದ ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದರು.