ವಾಷಿಂಗ್ಟನ್: ಭಾರತದ ಜೊತೆ ಮಾಡಿಕೊಂಡಿರುವ ವ್ಯಾಪಾರ ಒಪ್ಪಂದವನ್ನು ‘ಐತಿಹಾಸಿಕ’ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಅಮೆರಿಕದ ಜತೆ ವ್ಯಾಪಾರ ಒಪ್ಪಂದಗಳನ್ನು ಹೊಂದಿರುವ ರಾಷ್ಟ್ರಗಳಿಗೆ ಕಲ್ಲಿದ್ದಲು ರಫ್ತು ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸುವುದಾಗಿಯೂ ಅವರು ಹೇಳಿದ್ದಾರೆ.
ಅವರು 'ಚಾಂಪಿಯನ್ ಆಫ್ ಕಲ್ಲಿದ್ದಲು' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕಳೆದ ಕೆಲವು ತಿಂಗಳಲ್ಲಿ ನಮ್ಮ ಕಲ್ಲಿದ್ದಲು ರಫ್ತು ಪ್ರಮಾಣ ಹೆಚ್ಚಿಸಲು ನಾವು ಜಪಾನ್, ಕೊರಿಯಾ, ಭಾರತ ಮತ್ತು ಇತರ ದೇಶಗಳೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಈ ಮೂಲಕ ಅಮೆರಿಕ ಬೃಹತ್ ಇಂಧನ ರಫ್ತುದಾರ ದೇಶವಾಗುತ್ತಿದೆ. ಎಂದು ತಿಳಿಸಿದ್ದಾರೆ.
ನಮ್ಮ ಕಲ್ಲಿದ್ದಲಿನ ಗುಣಮಟ್ಟವು ಅತ್ಯುತ್ತಮವಾಗಿದ್ದು ಬಹುತೇಕ ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ ಎಂದೂ ಹೇಳಿದ್ದಾರೆ.
ಕಳೆದ ವಾರ, ಅಮೆರಿಕ ಮತ್ತು ಭಾರತ ಮಧ್ಯಂತರ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದವು. ಭಾರತವು ಅಮೆರಿಕದ ಕೈಗಾರಿಕಾ ಸರಕುಗಳು, ವ್ಯಾಪಕ ಶ್ರೇಣಿಯ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೇಲಿನ ಸುಂಕಗಳನ್ನು ತೆಗೆದುಹಾಕುತ್ತದೆ ಅಥವಾ ಕಡಿಮೆ ಮಾಡುತ್ತದೆ. ಮುಂದಿನ ಐದು ವರ್ಷಗಳಲ್ಲಿ 500 ಶತಕೋಟಿ ಡಾಲರ್ ಮೌಲ್ಯದ ಅಮೆರಿಕ ಉತ್ಪನ್ನಗಳನ್ನು ಭಾರತ ಖರೀದಿಸಬೇಕು ಎಂದು ಒಪ್ಪಂದವಾಗಿತ್ತು.