ಬ್ರಿಸ್ಟೋಲ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟಿ20 ಪಂದ್ಯವನ್ನೂ ಸೋತು ಟೀಂ ಇಂಡಿಯಾ ದೈನೇಸಿ ಸ್ಥಿತಿಗೆ ತಲುಪಿದೆ. ಮತ್ತೊಂದು ಸರಣಿ ಸೋಲಿನ ಬಳಿಕ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಪಕ್ಕ ಕುಳಿತು ಜೋರು ಜೋರಾಗಿ ಚರ್ಚೆ ನಡೆಸುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ ವಿರುದ್ಧ ನಾಲ್ಕನೇ ಪಂದ್ಯವನ್ನು 9 ವಿಕೆಟ್ ಗಳಿಂದ ಸೋತ ಟೀಂ ಇಂಡಿಯಾ ಐರ್ಲೆಂಡ್ ಬಳಿಕ ಸತತವಾಗಿ ಮತ್ತೊಂದು ಸರಣಿ ಸೋತಿದೆ. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ ಆದ ಬಳಿಕ ಟೀಂ ಇಂಡಿಯಾ ಒಂದೇ ಒಂದು ಪಂದ್ಯ ಗೆದ್ದಿಲ್ಲ. ಇದರಿಂದಾಗಿ ಅಭಿಮಾನಿಗಳು ಈತ ಐಪಿಎಲ್ ನಲ್ಲಿ ಮಾತ್ರ ಹುಲಿ ಎಂದು ಟ್ರೋಲ್ ಮಾಡಿದ್ದಾರೆ. ಇನ್ನು, ಈ ಪಂದ್ಯದ ಸೋಲಿನ ಬಳಿಕ ಡಗೌಟ್ ನಲ್ಲಿ ಶ್ರೇಯಸ್ ಮತ್ತು ಗಂಭೀರ್ ಅಕ್ಕಪಕ್ಕ ಕುಳಿತು ಜೋರಾಗಿ ಚರ್ಚೆ ನಡೆಸುತ್ತಿದ್ದುದು ಕಂಡುಬಂದಿದೆ. ಶ್ರೇಯಸ್ ತಮ್ಮ ಹತಾಶೆ, ಅಸಮಾಧಾನ ಹೊರಹಾಕುತ್ತಿದ್ದರೆ ಇತ್ತ ಗಂಭೀರ್ ಅವರನ್ನು ಸಮಾಧಾನಪಡಿಸುವ ರೀತಿ ಒಂದಿಷ್ಟು ಮಾತನಾಡುತ್ತಾರೆ. ಟೀಂ ಇಂಡಿಯಾ ನಾಯಕನಾಗುವುದು ಎಲ್ಲರ ಕನಸು. ನಾಯಕತ್ವ ಸಿಕ್ಕಾಗ ಶ್ರೇಯಸ್ ಕೂಡಾ ಖುಷಿಯಲ್ಲಿದ್ದರು. ಆದರೆ ಇದುವರೆಗೆ ಒಂದೇ ಒಂದು ಗೆಲುವು ಕಾಣದೇ ಅವರು ಹತಾಶರಾಗಿದ್ದಾರೆ.