2026-03-07 01:38:32

Dr Hamsalekha | ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಡಾ ಹಂಸಲೇಖ ಆಯ್ಕೆ |Speed News Kannada

Dr Hamsalekha | ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆ ಪ್ರಶಸ್ತಿಗೆ ಡಾ ಹಂಸಲೇಖ ಆಯ್ಕೆ |Speed News Kannada

ಬೆಂಗಳೂರು: ಕನ್ನಡ ಚಿತ್ರರಂಗದ 'ನಾದಬ್ರಹ್ಮ' ಎಂದೇ ಜನಪ್ರಿಯರಾಗಿರುವ ಹಿರಿಯ ಗೀತ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಡಾ. ಹಂಸಲೇಖ ಅವರನ್ನು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 'ಜೀವಮಾನ ಸಾಧನೆ ಪ್ರಶಸ್ತಿ'ಗೆ ರಾಜ್ಯ ಸರ್ಕಾರವು ಅಧಿಕೃತವಾಗಿ ಆಯ್ಕೆ ಮಾಡಿದೆ.

ಕರ್ನಾಟಕ ಸರ್ಕಾರವು ಜ.13 ರಂದು ಹೊರಡಿಸಿದ್ದ ಆದೇಶದಂತೆ ರಚಿಸಲಾಗಿದ್ದ ಆಯ್ಕೆ ಸಮಿತಿಯು, ಫೆಬ್ರವರಿ 4 ರಂದು ಸಭೆ ಸೇರಿ ಕನ್ನಡ ಚಲನಚಿತ್ರ ರಂಗಕ್ಕೆ ಡಾ. ಹಂಸಲೇಖ ಅವರು ನೀಡಿರುವ ಅಪ್ರತಿಮ ಕೊಡುಗೆಯನ್ನು ಪರಿಗಣಿಸಿ, ಸಮಿತಿಯು ಅವಿರೋಧವಾಗಿ ಶಿಫಾರಸು ಮಾಡಿದ ಮೂವರು ಗಣ್ಯರ ಪಟ್ಟಿಯಲ್ಲಿ ಡಾ. ಹಂಸಲೇಖ ಅವರ ಹೆಸರನ್ನು ಸರ್ಕಾರವು ಅಂತಿಮಗೊಳಿಸಿದೆ.

ಹಂಸಲೇಖ ಅವರು​ ಬಹುಮುಖ ಪ್ರತಿಭೆ. ಕೇವಲ ಸಂಗೀತ ನಿರ್ದೇಶನ ಮಾತ್ರವಲ್ಲದೆ, ಗೀತ ರಚನೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದಲ್ಲೂ ಅವರು ತಮ್ಮ ಮುದ್ರೆ ಒತ್ತಿದ್ದಾರೆ.

#ಕ್ರಾಂತಿಕಾರಿ_ಬದಲಾವಣೆ:

80 ಮತ್ತು 90ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಅವರು, ಜಾನಪದ ಸೊಗಡು ಮತ್ತು ಪಾಶ್ಚಾತ್ಯ ಸಂಗೀತದ ಸಮ್ಮಿಲನದ ಮೂಲಕ ಕ್ರಾಂತಿ ಮಾಡಿದವರು.

#ಪ್ರಶಸ್ತಿಗಳು:

ಈ ಹಿಂದೆ ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳಿಗೆ ಪಾತ್ರರಾಗಿದ್ದಾರೆ. ಈಗ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಜೀವಮಾನ ಸಾಧನೆಯ ಈ ಅತ್ಯುನ್ನತ ಗೌರವ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ನೀಡಿದಂತಾಗಿದೆ.

​ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನಾಳೆ (ಫೆಬ್ರವರಿ 6) ನಡೆಯಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.