2026-03-07 03:03:50

Dippy rejects Hollywood offer | ಆಡಿಷನ್ ನೀಡುವಂತೆ ಒತ್ತಾಯ ಸ್ವಾಭಿಮಾನಕ್ಕೆ ಧಕ್ಕೆ ಹಾಲಿವುಡ್ ಆಫರ್‌ನ ಎಡಗಾಲಿನಲ್ಲಿ ಒದ್ದು ಬಂದ ಡಿಪ್ಪಿ | Speed News Kannada

Dippy rejects Hollywood offer | ಆಡಿಷನ್ ನೀಡುವಂತೆ ಒತ್ತಾಯ ಸ್ವಾಭಿಮಾನಕ್ಕೆ ಧಕ್ಕೆ ಹಾಲಿವುಡ್ ಆಫರ್‌ನ ಎಡಗಾಲಿನಲ್ಲಿ ಒದ್ದು ಬಂದ ಡಿಪ್ಪಿ | Speed News Kannada

ಸಾಮಾನ್ಯವಾಗಿ ಚಿತ್ರರಂಗದಲ್ಲಿ ನೆಲೆಯೂರಬೇಕು, ಬೆಳೆಯಬೇಕು ಎಂದರೆ ಆಡಿಷನ್ ಮೊದಲ ಹೆಜ್ಜೆ. ಅವಕಾಶಕ್ಕೆ ಅಲೆಯುವ ದಿನಗಳಲ್ಲಿ ಹಲವರು ಈ ಮೆಟ್ಟಿಲನ್ನೇರುತ್ತಾರೆ. ಶಾರುಖ್ ಖಾನ್ ಇರಲಿ.. ಅಮಿತಾಬ್ ಬಚ್ಚನ್ ಇರಲಿ.. ಪ್ರಿಯಾಂಕ ಚೋಪ್ರಾ ಅಥವಾ ರಶ್ಮಿಕಾ ಮಂದಣ್ಣ ಅವರೇ ಇರಲಿ..
ಚಿತ್ರರಂಗದಲ್ಲಿಂದು ಖ್ಯಾತಿಯ ಶಿಖರಕ್ಕೇರಿದ ಬಹುತೇಕರು ಬಣ್ಣ ಹಚ್ಚುವ ಮುನ್ನ ಕ್ಯಾಮರಾ ಮುಂದೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶನ ಮಾಡಿಯೇ ಬಂದಿದ್ದಾರೆ. ಆಡಿಷನ್ ಸಾಲಿನಲ್ಲಿ ಸಮಾಧಾನದಿಂದ ಅವಕಾಶ ಕಾಯ್ದು ಇಂದು ಹಣ ಹೆಸರು ಕೀರ್ತಿಯನ್ನು ಸಂಪಾದಿಸಿದ್ದಾರೆ.
ಆದರೆ, ಬೆಳೆದ ನಂತರ ಇದೇ ಆಡಿಷನ್ ಹಲವರಿಗೆ ಮುಜುಗರವನ್ನುಂಟು ಮಾಡುತ್ತೆ. ದಶಕಗಳ ಕಾಲ ಚಿತ್ರರಂಗವನ್ನು ಆಳಿದ ನಂತರ, ತಮ್ಮ ಅಭಿನಯವನ್ನು ಜಗವೇ ಮೆಚ್ಚಿ ಕೊಂಡಾಡಿದ ನಂತರ, ತಮ್ಮ ಹಿಂದೆ ಅಸಂಖ್ಯಾತ ಅಭಿಮಾನಿಗಳಿದ್ದ ನಂತರವೂ ಪಾತ್ರಕ್ಕೆ ಆಡಿಷನ್ ನೀಡುವಂತೆ ಯಾರಾದರೂ ಹೇಳಿದರೆ ಆಗ ಈ ತಾರೆಯರ ಈಗೋಗೆ ಪೆಟ್ಟು ಬೀಳುತ್ತೆ. ಹೀಗಾಗಿ ದೊಡ್ಡ ದೊಡ್ಡ ಆಫರ್ ಗಳನ್ನು ಹಲವರು ಇಲ್ಲಿ ಕೈಚೆಲ್ಲಿದ್ದಾರೆ. ಉದಾಹರಣೆಗೆ ದೀಪಿಕಾ ಪಡುಕೋಣೆ. ಹೌದು, ನಿಮಗೆ ಗೊತ್ತಿರಲಿ. ಬೆಂಗಳೂರಿನ ಚೆಲುವೆ ದೀಪಿಕಾ ಪಡುಕೋಣೆ ಕೇವಲ ಬಾಲಿವುಡ್ ನಾಯಕಿ ಮಾತ್ರವಲ್ಲ. ಹಾಲಿವುಡ್ ಚೆಲುವೆ ಕೂಡ ಹೌದು. ಪ್ರಿಯಾಂಕ ಚೋಪ್ರಾ ಅವರಂತೆಯೇ ಹಾಲಿವುಡ್‌ನಲ್ಲಿ ಮಿಂಚಬೇಕೆನ್ನುವ ಹೆಬ್ಬಯಕೆ ಹೊಂದಿರುವ ದೀಪಿಕಾ 
ಇಂಥಾ ದೀಪಿಕಾ ಪಡುಕೋಣೆ ಮತ್ತೊಮ್ಮೆ ಹಾಲಿವುಡ್‌ಗೆ ಹಾರುತ್ತಿದ್ದಾರೆ ಎನ್ನುವ ಸುದ್ದಿ ಕೆಲ ದಿನಗಳ ಹಿಂದೆ ಸದ್ದು ಮಾಡಿತ್ತು. ಹಾಲಿವುಡ್‌ನ ಅತ್ಯಂತ ಜನಪ್ರಿಯ ಸರಣಿಯಾದ "ದ್ ವೈಟ್ ಲೋಟಸ್'ನ ಸೀಸನ್ ನಾಲ್ಕರಲ್ಲಿ ದೀಪಿಕಾ ನಾಯಕಿಯ ಪಾತ್ರ ನಿರ್ವಹಿಸುತ್ತಿದ್ದಾರೆ ಎಂಬ ವಿಚಾರ ಕೇಳಿ ಇವರ ಭಕ್ತಗಣ ಹುಚ್ಚೆದ್ದಿತ್ತು. ಆದರೆ.. ಇದೀಗ ಬಂದ ಸುದ್ದಿಯ ಪ್ರಕಾರ ದೀಪಿಕಾ ಪಡುಕೋಣೆ ಈ ಅವಕಾಶವನ್ನು ಎಡಗಾಲಿನಲ್ಲಿ ಒದ್ದು ಹೊರ ಬಂದಿದ್ದಾರೆ. ಅದಕ್ಕೆ ಕಾರಣ ಆಗಲೇ ಹೇಳಿದಂತೆ ಆಡಿಷನ್.
ಹೌದು, ಅಸಲಿಗೆ ಈ ಸರಣಿಯ ಸೃಷ್ಟಿಕರ್ತ ಮೈಕ್ ವೈಟ್, ಸ್ಟ್ರಾರ್ ಯಾರೇ ಇರಲಿ, ಅವರು ಎಷ್ಟೇ ಜನಪ್ರಿಯರಾಗಿರಲಿ, ಕಡ್ಡಾಯವಾಗಿ ಆಡಿಷನ್ ನೀಡಬೇಕೆಂಬ ನಿಯಮವನ್ನು ಪಾಲಿಸುವ ವ್ಯಕ್ತಿ. ಈ ನಿಯಮ ದೀಪಿಕಾ ಪಡುಕೋಣೆ ವಿಚಾರದಲ್ಲಿ ಕೂಡ ಮೈಕ್ ವೈಟ್ ಜಾರಿ ಮಾಡಲು ಮುಂದಾಗಿದ್ದರು. ಆದರೆ, ದೀಪಿಕಾ ಪಡುಕೋಣೆಗೆ ಇದು ಇಷ್ಟವಾಗಿಲ್ಲ. ಬದಲಿಗೆ ಆಡಿಷನ್ ನೀಡುವುದು ಕಿರಿಕಿರಿ ಎನಿಸಿದೆ. ಯಾರಿಗೆ ಗೊತ್ತು ನನ್ನ ಇಷ್ಟು ವರ್ಷದ ಪ್ರಯಾಣ ಮತ್ತು ಸಾಧನೆಯೇ ನನ್ನ ಅಭಿನಯಕ್ಕೆ ಹಿಡಿದ ಕೈಗನ್ನಡಿ ಎಂಬ ನಿಲುವು ದೀಪಿಕಾ ಅವರದ್ದಾಗಿದ್ದರೂ ಆಗಿರಬಹುದು. ಈ ಹಿನ್ನೆಲೆ ದೀಪಿಕಾ ಪಡುಕೋಣೆ ಚಿತ್ರದಿಂದ ಹೊರ ಬರುವುದೇ ಉತ್ತಮ ಎನ್ನುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅದ್ರಂತೆ ಚಿತ್ರದಿಂದ ಹೊರ ಬಂದಿದ್ದಾರೆ ಎಂದು "ವೆರೈಟಿ ಇಂಡಿಯಾ" ವರದಿ ಮಾಡಿದೆ.
ಅಂದ್ಧಾಗೇ ದೀಪಿಕಾ ಪಡುಕೋಣೆ ಚಿತ್ರದಿಂದ ಹೊರ ಬಂದಿದ್ದು ಇದು ಮೊದಲೇನಲ್ಲ. ಕಳೆದ ವರ್ಷ ದೀಪಿಕಾ ಪಡುಕೋಣೆ ಪ್ರಭಾಸ್ ಮತ್ತು ಸಂದೀಪ್ ರೆಡ್ಡಿ ವಂಗಾ ಜೋಡಿ "ಸ್ಪಿರಿಟ್" ಚಿತ್ರದಿಂದ ಕೂಡ ಹೊರ ಬಂದಿದ್ದರು. "ಕಲ್ಕಿ 2" ಚಿತ್ರತಂಡಕ್ಕೂ ದೀರ್ಘ ದಂಡ ನಮಸ್ಕಾರ ಹಾಕಿದ್ದರು. ಇವೆರಡು ಚಿತ್ರದಿಂದ ಹೊರ ಬರಲು ದೀಪಿಕಾ ಅವರ ಹತ್ತು ಹಲವು ಷರತ್ತುಗಳೇ ಕಾರಣವೆಂದು ಹೇಳಲಾಗಿತ್ತು. ಈ ಕುರಿತು ದೀಪಿಕಾ ಪಡುಕೋಣೆ ಮಾತನಾಡಿದ್ದರು ಕೂಡ.
"CNBC-TV18"ಗೆ ನೀಡಿದ್ದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ದೀಪಿಕಾ ಪಡುಕೋಣೆ, ನನಗೆ ಯಾರ ಹೆಸರನ್ನು ಹೇಳಲು ಇಷ್ಟ ಇಲ್ಲ. ಈ ವಿಚಾರವನ್ನು ಇನ್ನೂ ದೊಡ್ಡದು ಮಾಡಲು ಕೂಡ ಮನಸ್ಸಿಲ್ಲ ಎಂದಿದ್ದರು.
ಕೇವಲ ನಾನು ಮಾತ್ರ ಅಲ್ಲ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಸ್ಥಾನದಲ್ಲಿರುವ ನಟರೇ 8 ಗಂಟೆಗಳ ನಂತರ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದ ದೀಪಿಕಾ, ಅವರು ಕೇವಲ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಕೆಲಸ ಮಾಡುತ್ತಾರೆ. ಆದರೆ ಅವರನ್ನು ಯಾರು ಪ್ರಶ್ನೆ ಮಾಡುವುದಿಲ್ಲ. ಅವರ ವಿಚಾರ ಯಾವತ್ತು ಸುದ್ದಿಯಾಗುವುದಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಈಗ ಹಾಲಿವುಡ್ ಚಿತ್ರದಿಂದ ಕೂಡ ಹೊರ ಬಂದಿದ್ದಾರೆ. ಈ ಹಿನ್ನೆಲೆ ದೀಪಿಕಾ ಪಡುಕೋಣೆ ಮತ್ತೊಮ್ಮೆ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿದ್ದಾರೆ. ದೀಪಿಕಾ ಅವರಿಗೆ ಈಗ ಕೇವಲ ಸಿನಿಮಾಗಳ ಸಂಖ್ಯೆ ಮುಖ್ಯವಲ್ಲ, ಬದಲಾಗಿ ತಮ್ಮ ಕೆಲಸದ ಪರಿಸರ ಮತ್ತು ಗೌರವ ಮುಖ್ಯ ಎಂದು ಇವರ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. 

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.