ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಬಾಕ್ಸ್ ಆಫೀಸ್ ಇತಿಹಾಸವನ್ನು ನಿರ್ಮಿಸಿದೆ. ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ, ಬ್ಲಾಕ್ ಬಸ್ಟರ್ ಹಿಟ್ ಆಗಿರುವ ಈ ಸಿನಿಮಾ, ಟಿಕೆಟ್ ಮಾರಾಟದ ದಾಖಲೆಗಳನ್ನೂ ಪುಡಿಪುಡಿ ಮಾಡಿದೆ.ಈವರೆಗೂ 'ಧುರಂಧರ್' ಸಿನಿಮಾದ ಒಟ್ಟು 4 ಕೋಟಿ ಟಿಕೆಟ್ಗಳು ಮಾರಾಟವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ದಾಖಲೆ ಮೂಲಕ 'ಧುರಂಧರ್' ಸಿನಿಮಾ ಆಮಿರ್ ಖಾನ್, ಶಾರುಖ್ ಖಾನ್ ಮುಂತಾದ ದಿಗ್ಗಜ ನಟರ ಸೂಪರ್ ಹಿಟ್ ಸಿನಿಮಾಗಳನ್ನು ಹಿಂದಿಕ್ಕಿದೆ. ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್ ಪಡೆದಿರುವ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ನಿರಂತರವಾಗಿ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸಿದೆ.
ಕಳೆದ ವರ್ಷದ ಡಿಸೆಂಬರ್ 5ರಂದು 'ಧುರಂಧರ್' ಸಿನಿಮಾ ತೆರೆಗೆ ಬಂದಿತ್ತು. ಆದಿತ್ಯ ಧಾರ್ ನಿರ್ದೇಶನದ ಈ ಸಿನಿಮಾ ಮೊದಲ ದಿನವೇ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಲವಾದ ಓಪನಿಂಗ್ ಪಡೆದಿತ್ತು. ನಂತರ ಪ್ರೇಕ್ಷಕರಿಂದ ದೊರೆತ ಬಾಯಿ ಮಾತಿನ ಭರ್ಜರಿ ಪ್ರಚಾರದಿಂದಾಗಿ ಸಿನಿಮಾ ನೋಡಲು ಜನರು ಚಿತ್ರಮಂದಿರಗಳಿಗೆ ಮುಗಿಬಿದ್ದರು.. ಅದರ ಪರಿಣಾಮವಾಗಿ 4 ಕೋಟಿ ಟಿಕೆಟ್ ಗಳ ಮಾರಾಟದ ಅಂಕಿ ತಲುಪಿದೆ.
ಈ ಮೊದಲು ಶಾರುಖ್ ಖಾನ್ ನಟನೆಯ 'ಕುಚ್ ಕುಚ್ ಹೋತಾ ಹೈ' ಸಿನಿಮಾ 3.5 ಕೋಟಿ ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು. ಆಮಿರ್ ಖಾನ್ ನಟನೆಯ 'ದಂಗಲ್' ಸಿನಿಮಾ 3.7 ಕೋಟಿ ಟಿಕೆಟ್‌ಗಳ ಮಾರಾಟ ಸಾಧಿಸಿತ್ತು. ಹಾಗೆಯೇ 'ಪಿಕೆ' ಸಿನಿಮಾ 3.5 ಕೋಟಿ ಟಿಕೆಟ್ ಮಾರಾಟ ಮಾಡಿತ್ತು. ಈ ಎಲ್ಲ ದಾಖಲೆಗಳನ್ನು 'ಧುರಂಧರ್' ಸಿನಿಮಾ ಮುರಿದು ಹಾಕಿದೆ.
ಆದರೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 4 ಕೋಟಿ ಟಿಕೆಟ್‌ಗಿಂತ ಹೆಚ್ಚು ಮಾರಾಟ ಮಾಡಿದ ಸಿನಿಮಾಗಳು ಕೇವಲ 19 ಮಾತ್ರ. 'ಬಾಹುಬಲಿ 2', 'ಶೋಲೆ', 'ಮೊಘಲ್ ಎ ಆಜಂ' ಹಾಗೂ 'ಮದರ್ ಇಂಡಿಯಾ' ಸಿನಿಮಾಗಳು ಅಂದಾಜು ತಲಾ 10 ಕೋಟಿ ಟಿಕೆಟ್ ಮಾರಾಟ ಮಾಡಿದ್ದವು. ಆ ಮಹಾದಾಖಲೆಗಳನ್ನು ಮುರಿಯಲು 'ಧುರಂಧರ್' ಸಿನಿಮಾಗೆ ಇನ್ನೂ ಸಾಧ್ಯವಾಗಿಲ್ಲ.
'ಧುರಂಧರ್' ಸಿನಿಮಾದ ಅಪಾರ ಯಶಸ್ಸಿನ ಹಿನ್ನೆಲೆಯಲ್ಲಿ ಇದೀಗ ಅದರ ಸೀಕ್ವೆಲ್ ಮೇಲೆ ನಿರೀಕ್ಷೆ ಗಗನಕ್ಕೇರಿದೆ. 'ಧುರಂಧರ್ 2' ಸಿನಿಮಾ ಮಾರ್ಚ್ 19ರಂದು ಬಿಡುಗಡೆಯಾಗಲಿದೆ. ಮೊದಲ ಭಾಗ ಮಾಡಿದ ದಾಖಲೆಗಳನ್ನು ಎರಡನೇ ಭಾಗ ಮುರಿಯುತ್ತಾ ಎಂಬುದನ್ನು ಚಿತ್ರಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.