ಬೆಂಗಳೂರು: ಇಂದು ಚಾಲೆಜಿಂಗ್ ಸ್ಟಾರ್ʼ ದರ್ಶನ್ ಹುಟ್ಟುಹಬ್ಬ. ಆದರೆ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ವಿಚಾರಣಾಧೀನ ಕೈದಿಯಾಗಿ ಬಂಧಿಯಾಗಿದ್ದಾರೆ. ಹಾಗಾಗಿ, ಅವರ ಅನುಪಸ್ಥಿತಿ ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಕಾಡುತ್ತಿದೆ.
ಅಭಿಮಾನಿಗಳ ಅಭಿಮಾನಕ್ಕೆ ಕೊರತೆ ಮಾತ್ರ ಕಂಡು ಬಂದಿಲ್ಲ. ದರ್ಶನ್ ಜೈಲಿನಲ್ಲಿದ್ದರೂ, ಅವರ ಫ್ಯಾನ್ಸ್ ಸಂಭ್ರಮದಿಂದಲೇ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ಪತ್ರ ಬರೆದ ಡಿ ಕಂಪನಿ
ದರ್ಶನ್ ಅವರ ಅಧಿಕೃತ ಫ್ಯಾನ್ಸ್ ಪೇಜ್ ಡಿ ಕಂಪನಿಯಲ್ಲಿ ಪತ್ರವೊಂದನ್ನು ಹಂಚಿಕೊಳ್ಳಲಾಗಿದೆ. ಹುಟ್ಟುಹಬ್ಬಕ್ಕೆ ಏನು ಮಾಡಬೇಕು ಎಂದು ಹೇಳಲಾಗಿದೆ. ಡಿ ಬಾಸ್ ಸೆಲೆಬ್ರಿಟಿಸ್ ಗಳೇ, ನಿಮ್ಮೆಲ್ಲರಿಗೂ ಹೃದಯ ತುಂಬಿ ಧನ್ಯವಾದಗಳು. ವರ್ಷದಿಂದ ವರ್ಷಕ್ಕೆ ನೀವು ಮಾಡುತ್ತಿರುವ ಸಾಮಾಜಿಕ ಸೇವೆಯ ಹಬ್ಬ ಈಗ ಕರ್ನಾಟಕದಲ್ಲೇ ಮಾದರಿಯಾಗಿದೆ. ಅನಾಥಾಶ್ರಮಗಳಲ್ಲಿ ಊಟ ವಿತರಣೆ, ಬಟ್ಟೆ–ಪುಸ್ತಕ ದಾನ, ರಕ್ತದಾನ ಶಿಬಿರಗಳು, ವೃದ್ಧಾಶ್ರಮಗಳಲ್ಲಿ ಸೇವೆ.. ಇವೆಲ್ಲವೂ ಇಂದು ಡಿ ಬಾಸ್ ಫ್ಯಾನ್ಸ್ ಅಂತ ಹೇಳಿಸಿಕೊಂಡಿರುವ ನಮ್ಮ ಕುಟುಂಬದ ನಿಜವಾದ ಗುರುತು" ಎಂದು ತಿಳಿಸಲಾಗಿದೆ.
ನಟ ದರ್ಶನ್ ಹುಟ್ಟು ಹಬ್ಬ ಸಂಭ್ರಮವನ್ನ ಜೈಲಿನಲ್ಲೇ ಕಳೆಯುವ ಹಾಗಾಗಿದೆ. ಆದರೆ ದರ್ಶನ್ ಅವರ ನೆಚ್ಚಿನ ಅಭಿಮಾನಿಗಳು ಬರ್ತ್ ಡೇ ಅನ್ನು ಖುಷಿಯಾಗಿ ಆಚರಿಸುತ್ತಿದ್ದಾರೆ. ಹೀಗಿರುವಾಗ ಕೆಲವು ಹುಚ್ಚು ಅಭಿಮಾನಿಗಳು ದರ್ಶನ್ ಮನೆಮುಂದೆ ಹುಚ್ಚಾಟ ತೋರಿಸಿದ್ದಾರೆ.
ಬರ್ತ್ ಡೇ ದಿನ ದರ್ಶನ್ ನೆನೆದು ವಿಜಯಲಕ್ಷ್ಮಿ ಕಣ್ಣೀರು..?
ಇನನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರೂ ಕೂಡ ಭಾವುಕರಾಗಿ ಪತಿಗೆ ಶುಭಾಶಯ ಕೋರಿದ್ದಾರೆ. ವಿಜಯಲಕ್ಷ್ಮೀ ಅವರು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಪತಿಯ ಬಿಡುಗಡೆಗೆ ಪ್ರಾರ್ಥಿಸಿದ್ದಾರೆ. ಪೊಲೀಸರ ವಿಶೇಷ ಒಪ್ಪಿಗೆ ಪಡೆದು ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಬರುವ ಸಾಧ್ಯತೆಗಳಿವೆ.
ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ʼಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯಗಳು’ ಎಂದು ವಿಜಯಲಕ್ಷ್ಮೀ ಇನ್ ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್, ಪುತ್ರ ವಿನೀಶ್ ಹಾಗೂ ವಿಜಯಲಕ್ಷ್ಮೀ ಅವರು ಕೇಕ್ ಎದುರು ನಿಂತಿರುವ ಈ ಪೋಸ್ಟ್ ಗಮನ ಸೆಳೆದಿದೆ. ದರ್ಶನ್ ಅವರಿಗೆ ಆನೆ ಎಂದರೆ ಪ್ರೀತಿ. ಈ ಕೇಕ್ ಅನ್ನೂ ಆನೆಯಂತೆ ತಯಾರಿಲಾಗಿದೆ.
ದರ್ಶನ್ ನಿವಾಸದ ಬಳಿ ಅಭಿಮಾನಿಯ ಹುಚ್ಚಾಟ:
ದರ್ಶನ್ ನಿವಾಸದ ಬಳಿ ಅಭಿಮಾನಿಯೊಬ್ಬ ರಂಪ ಮಾಡಿದ್ದಾನೆ. ಹೇಳಿದ ಮಾತು ಕೇಳದ ನವೀನ್ ಎಂಬ ಅಭಿಮಾನಿಗೆ ಪೊಲೀಸರು ಕಪಾಳ ಮೋಕ್ಷ ಮಾಡಿ ಪಾಠ ಕಲಿಸಿದ್ದಾರೆ. ಈತ ದರ್ಶನ್ ಮನೆ ಹತ್ತಿರಕ್ಕೆ ಹೋಗಲೇ ಬೇಕು ಎಂದು ಕಿರಿಕಿರಿ ಮಾಡಿದ್ದ.
ನವೀನ್ ಮಾತನಾಡಿ ನಾನು ದರ್ಶನ್ ಸರ್ ಅಭಿಮಾನಿ ಚಾಮರಾಜ ಪೇಟೆ ನಿವಾಸಿ. ಕಳೆದ 6 ವರ್ಷಗಳಿಂದ ಅರ್ ಅರ್ ನಗರದಲ್ಲಿ ವಾಸವಾಗಿದ್ದೀನಿ. ದರ್ಶನ್ ಅವರ ಮನೆಬಳಿ ಪೂಜೆ ಮಾಡಲು ಬಿಡಿ ಅಂತ ಕೇಳಿದೆ. ಸಿಂಗಲ್ ಸ್ಟಾರ್ ಒಬ್ರು ಬಂದು ಏಕಾಏಕಿ ಕಪಾಳಕ್ಕೆ ಹೊಡೆದರು. ನಾನು ಅವರ ಕೆಲಸಕ್ಕೆ ಅಡ್ಡಿಪಡಿಸಿಲ್ಲ. ಸುತ್ತ ಮುತ್ತ ಸಿಸಿಟಿವಿ ಚೆಕ್ ಮಾಡಿಕೊಳ್ಳಿ ಎಂದು ಅಲವತ್ತುಕೊಂಡಿದ್ದಾನೆ.
ಏನೇ ಆಗಲಿ, ಅಭಿಮಾನಿಗಳು ಸಾಮಾಜಿಕ ಕಾರ್ಯಗಳ ಮೂಲಕ ಪ್ರೀತಿ ತೋರುತ್ತಿದ್ದಾರೆ ಎನ್ನುವುದು ಎಷ್ಟು ನಿಜವೋ ನೆಚ್ಚನ ನಟ ಜೈಲಿನಲ್ಲಿರುವುದು ಅಷ್ಟೇ ನೋವುಂಟು ಮಾಡಿದೆ ಎನ್ನುವುದು ಅಷ್ಟೇ ಸತ್ಯ.