ಎಲಿಫೆಂಟ್-ಪೂಪ್ ಕಾಫಿ ಇಡೀ ವಿಶ್ವದಲ್ಲೇ ಅತ್ಯಂತ ಅಪರೂಪದ ಹಾಗೆ ಕಾಸ್ಟ್ಲೀ ಕಾಫಿಗಳಲ್ಲಿ ಒಂದು. ಇದು ಬೇರೆ ಕಾಫಿಗಿಂತ ಸಖತ್ ಸಾಫ್ಟ್ ಮತ್ತು ಸ್ವಲ್ಪ ಕಹಿ ರುಚಿಯನ್ನು ಹೊಂದಿರುತ್ತದೆ. ಈ ಕಾಫಿ ಕುಡಿಯುತ್ತಿದ್ದರೆ ಯಾವುದೋ ಚಾಕೊಲೇಟ್ ನಟ್ ತಿನ್ನುತ್ತಿದ್ದೀರಾ ಎನಿಸುತ್ತದೆ. ಲಕ್ಸುರಿ ಕಾಫಿ ಶಾಪ್‌ಗಳಲ್ಲಿ ಮಾತ್ರ ನಿಮಗೆ ಈ ಕಾಫಿ ಸಿಗುತ್ತದೆ. ಆದರೆ "ಬ್ಲಾಕ್ ಐವರಿ ಕಾಫಿ"ಯ ಈ ವಿಭಿನ್ನ ರುಚಿ ಬಗ್ಗೆ ಹಲವರಿಗೆ ಗೊಂದಲಗಳಿವೆ. ಇತರೆ ಕಾಫಿಗಳಿಗಿಂತ ಇದು ಹೇಗೆ ಇಷ್ಟೊಂದು ವಿಭಿನ್ನವಾಗಿದೆ? ಇದರ ಹಿಂದಿನ ರಹಸ್ಯವೇನು? ಎಂಬ ಪ್ರಶ್ನೆಗಳು ಕಾಫಿ ಪ್ರಿಯರಲ್ಲಿದೆ. ಈ ಎಲ್ಲ ಪ್ರಶ್ನೆಗಳಿಗೆ ಇದೀಗ ಟೋಕಿಯೊ ಮೂಲದ ವಿಜ್ಞಾನಿಗಳ ತಂಡ ಸ್ಪಷ್ಟ ಉತ್ತರ ಕಂಡುಕೊಂಡಿದೆ.ಈ ಕಾಫಿ ರುಚಿಯ ಹಿಂದಿನ ಕಾರಣ ಅದರ ತಯಾರಿಕೆ. ಹೌದು, ಬ್ಲ್ಯಾಕ್ ಐವರಿ ಕಾಫಿಯನ್ನು ಥೈಲ್ಯಾಂಡ್‌ನಲ್ಲಿರುವ ಆನೆ ಅಭಯಾರಣ್ಯದಲ್ಲಿ ಉತ್ಪಾದಿಸಲಾಗುತ್ತದೆ. ಇಲ್ಲಿ ಆನೆಗಳಿಗೆ ಉತ್ತಮ ಗುಣಮಟ್ಟದ ಅರೇಬಿಕಾ ಕಾಫಿ ಚೆರ್ರಿಗಳನ್ನು ತಿನ್ನಲು ನೀಡಲಾಗುತ್ತದೆ. ಆನೆಗಳ ಜೀರ್ಣಕ್ರಿಯೆ ವೇಳೆ, ಕಾಫಿ ಬೀಜಗಳಲ್ಲಿರುವ ಕಹಿತನಕ್ಕೆ ಕಾರಣವಾಗುವ ಪ್ರೋಟೀನ್‌ಗಳು ಹೋಗುತ್ತವೆ. ಆಮೇಲೆ ಕಾಫಿ ಬೀಜಗಳನ್ನು ಅವುಗಳ ಸಗಣಿಯಿಂದ ಸಂಗ್ರಹಿಸಿ, ಸ್ವಚ್ಛಗೊಳಿಸಿ, ಹುರಿಯಲಾಗುತ್ತದೆ. ಈ ರೀತಿ ರೋಸ್ಟ್ ಮಾಡಿದ ಕಾಫಿ ಪೌಡರ್ ಕುಡಿದಾಗ ಕಡಿಮೆ ಕಹಿ ಮತ್ತು ಚಾಕೊಲೇಟ್‌ನಂತಹ ಮೃದುವಾದ ರುಚಿ ನಿಮಗೆ ಸಿಗುತ್ತದೆ.ಬ್ಲ್ಯಾಕ್ ಐವರಿ ಕಾಫಿ ಯಾಕೆ ಸಾಮಾನ್ಯ ಕಾಫಿಗಿಂತ ಮೃದುವಾಗಿರುತ್ತದೆ ಎಂಬುದನ್ನು ತಿಳಿಯಲು ಸಂಶೋಧಕರು ಆನೆಗಳ ಸಗಣಿ ಮಾದರಿಗಳನ್ನು ಅಧ್ಯಯನ ಮಾಡಿದ್ದಾರೆ. ಅವರು ಕಾಫಿ ಚೆರ್ರಿಗಳನ್ನು ತಿನ್ನುವ ಆನೆಗಳ ಸಗಣಿಯನ್ನು ಮತ್ತು ಕಾಫಿ ಬೀಜ ತಿನ್ನದ ಅದೇ ಅಭಯಾರಣ್ಯದ ಇತರ ಆನೆಗಳ ಸಗಣಿಯನ್ನು ಹೋಲಿಕೆ ಮಾಡಿ ನೋಡಿದ್ದಾರೆ.ಈ ಅಧ್ಯಯನದಲ್ಲಿ ಒಂದು ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಕಾಫಿ ಚೆರ್ರಿಗಳನ್ನು ತಿನ್ನುವ ಆನೆಗಳ ಕರುಳಿನಲ್ಲಿ ಪೆಕ್ಟಿನ್ ಎನ್ನುವ ನೈಸರ್ಗಿಕ ಅಂಶವನ್ನು ಒಡೆಯುವ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚು ಇರುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಪೆಕ್ಟಿನ್ ಎನ್ನುವುದು ಕಾಫಿ ಬೀಜಗಳಲ್ಲಿ ಸಹಜವಾಗಿ ಇರುವ ಪದಾರ್ಥ. ಸಾಮಾನ್ಯವಾಗಿ ಕಾಫಿ ಬೀಜಗಳನ್ನು ಹುರಿಯುವಾಗ ಈ ಪೆಕ್ಟಿನ್ ಒಡೆಯುತ್ತದೆ ಮತ್ತು ಅದರಿಂದ ಕಾಫಿಗೆ ಕಹಿ ರುಚಿ ಬರುತ್ತದೆ.ಆದರೆ ಆನೆಗಳ ಕರುಳಿನೊಳಗಿನ ಬ್ಯಾಕ್ಟೀರಿಯಾಗಳು ಕಾಫಿ ಬೀಜಗಳನ್ನು ಹುರಿಯುವ ಮೊದಲೇ ಪೆಕ್ಟಿನ್ ಅಂಶವನ್ನು ಭಾಗಶಃ ತೆಗೆದುಹಾಕುತ್ತವೆ. ಪರಿಣಾಮವಾಗಿ, ಹುರಿಯುವಾಗ ಕಡಿಮೆ ಕಹಿ ರುಚಿಯ ಸಂಯುಕ್ತಗಳು ಮಾತ್ರ ರೂಪುಗೊಳ್ಳುತ್ತವೆ. ಇದೇ ಕಾರಣಕ್ಕೆ ಬ್ಲ್ಯಾಕ್ ಐವರಿ ಕಾಫಿ ಸಾಮಾನ್ಯ ಕಾಫಿಗಿಂತ ಹೆಚ್ಚು ಸ್ಮೂತ್ ರುಚಿಯನ್ನು ಹೊಂದಿರುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.