ತುಮಕೂರಿನಲ್ಲಿ ನಿನ್ನೆ ನಡೆದ ಸರ್ಕಾರದ ಮೂರು ವರ್ಷಗಳ ಸಾಧನಾ ಸಮಾವೇಶಕ್ಕೆ ಹೋಗುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಆಪ್ತ ಸಚಿವರು ಉಪಾಹಾರ ಸೇವಿಸುವ ನೆಪದಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ಚರ್ಚೆ ನಡೆಸಿದ್ದಾರೆ. ಈ ಸಬೆಯಲ್ಲಿ ಸಚಿವರಾದ ಎಚ್.ಸಿ. ಮಹದೇವಪ್ಪ, ಬಿ.ಝೆಡ್. ಜಮೀರ್ ಅಹಮದ್ ಖಾನ್, ಕೆ. ವೆಂಕಟೇಶ್ ಮೊದಲಾದವರು ಭಾಗವಹಿಸಿದ್ದು ತಿಂಡಿ ತಿಂದು ಮಾತುಕತೆ ನಡೆಸಿ ಒಟ್ಟಾಗಿಯೇ ತುಮಕೂರಿಗೆ ತೆರಳಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರ ಜತೆ ಸಭೆ ನಡೆಸಿರುವುದು ಕುತೂಹಹಲ ಮೂಡಿಸಿದೆ. ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನರ್ ರಚನೆ ಕುರಿತು ಮಾತ್ರ ಚರ್ಚೆ ನಡೆದಿದೆಯೇ ಎನ್ನುವುದು ಬಹಿರಂಗವಾಗಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನರ್ ರಚನೆ ಯಾವುದೇ ನಡೆದರೂ ತಮ್ಮ ನಿಲುವು ಏನಿರಬೇಕು ಎಂಬ ಬಗ್ಗೆ ಸಚಿವರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನರ್ ರಚನೆ ಯಾವುದೇ ನಡೆದರೂ ತಮ್ಮ ನಿಲುವು ಏನಿರಬೇಕು ಎಂಬ ಬಗ್ಗೆ ಸಚಿವರು ಚರ್ಚಿಸಿದ್ದಾರೆ ಎಂದು ಗೊತ್ತಾಗಿದೆ.
ಸಭೆ ನಡೆಸಿದ್ದರ ಬಗ್ಗೆ ಪ್ರಶ್ನಿಸಿದಾಗ ಸಚಿವ ಜಮೀರ್ ಅಹಮದ್ ಖಾನ್, ನಾವು ಗುಪ್ತ ಸಭೆ ನಡೆಸಿಲ್ಲ. ಬದಲಾಗಿ, ಜೊತೆಯಲ್ಲಿ ಉಪಹಾರ ಸೇವಿಸಿದ್ದೇವೆ. ಸಾಧನಾ ಸಮಾವೇಶಕ್ಕೆ ಜೊತೆಯಲ್ಲಿ ಹೋಗೋಣ ಎಂದು ಒಂದು ಕಡೆ ಸೇರಿದ್ದೇವೆ ಎಂದಿದ್ದಾರೆ.
ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿ, ಕನ್ನಡ ಶಾಲೆ ಹುಡುಗರು ಒಟ್ಟಾಗಿ ಸೇರಿ ಪ್ರವಾಸಕ್ಕೆ ಹೋಗುವ ರೀತಿಯಲ್ಲಿ ನಾವು ತುಮಕೂರಿಗೆ ಹೋಗಲು ಸೇರಿದ್ದೆವು ಎಂದಿದ್ದಾರೆ.
ದೆಹಲಿಗೆ ನಾವು ಹೋಗುವುದಿಲ್ಲ. ಸಿಎಂ ಡಿಸಿಎಂ ಅವರನ್ನು ಹೈಕಮಾಂಡ್ ಕರೆಯಬಹುದು. ರಾಹುಲ್ ಗಾಂಧಿ ಒಂದು ವಾರದ ನಂತರ ದೆಹಲಿಗೆ ಆಗಮಿಸಲಿದ್ದು, ನಂತರ ಅವರು ರಾಜ್ಯದ ನಾಯಕರನ್ನು ಕರೆಯಬಹುದು ಎಂದು ತಿಳಿಸಿದ್ದಾರೆ.
ಜಾರ್ಜ್ ನಿವಾಸದಲ್ಲಿ ಭೋಜನ:
ಈ ಸಭೆ ಇಲ್ಲಿಗೆ ನಿಲ್ಲುವುದಿಲ್ಲ. ಸೋಮವಾರ ಕೇರಳಂ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮರಳಿದ ನಂತರ ಮಧ್ಯಾಹ್ನ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ನಿವಾಸದಲ್ಲಿ ಊಟಕ್ಕೆ ಸೇರಿದ್ದಾರೆ. ಅಲ್ಲಿಯೂ ಗುಪ್ತ್ ಗುಪ್ತ್ ಮಾತುಕತೆ ನಡೆದಿದೆ. ಊಟದ ನೆಪದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೆ.ಎಚ್. ಮುನಿಯಪ್ಪ ಮೊದಲಾದವರು ಸಭೆ ನಡೆಸಿದ್ದಾರೆ.
ಘಟಾನುಘಟಿಗಳೆಲ್ಲಾ ಸೇರಿರುವುದು ನೋಡಿದರೆ ಮಹತ್ವದ ವಿಷಯ ಕುರಿತು ಚರ್ಚೆ ನಡೆದಿದೆ ಎನ್ನುವುದರಲ್ಲಿ ಸಂಶಯಗಳಿಲ್ಲ. ಆದರೆ ಯಾವ ವಿಷಯ ಕುರಿತು ಮಾತುಕತೆ ನಡೆದಿದೆ ಎಂಬ ಕುತೂಹಲ ಬಹಿರಂಗಗೊಂಡಿಲ್ಲ.