ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ವಿಚಾರವಾಗಿ ಚರ್ಚೆಗೆ ಪಂಥಾಹ್ವಾನ ನೀಡಿದ್ದಾರೆ. ಈ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಬಹಿರಂಗ ಚರ್ಚೆಗೆ ಅವರೇ ಸಮಯ ಸ್ಥಳ ನಿಗಧಿಪಡಿಸಲಿ ಎಂದು ಜೆಡಿಎಸ್ ಮುಖಂಡ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬಿಡದಿ ಟೌನ್ ಶಿಪ್ ಯೋಜನೆಗೆ ಬಿಡದಿಯಲ್ಲಿ ಮೂರೂವರೆ ಸಾವಿರ ರೈತರು ತಕರಾರು ತೆಗೆದು ಅರ್ಜಿ ಕೊಟ್ಟಿದ್ದಾರೆ. ರೈತರನ್ನು ರೌಡಿಗಳು ಮತ್ತು ಪೊಲೀಸರ ಮೂಲಕ ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಯೋಜನೆಯಿಂದ ಒಳ್ಳೆಯದು ಆಗುವುದಿದ್ದರೆ ರೈತರೆ ಸಂತೋಷವಾಗಿ ಭೂಮಿ ಕೊಡುತ್ತಿದ್ದರು. ಆದರೆ ಇಲ್ಲಿ ಭೂಮಿ ಕೊಡಲು ರೈತರು ಬಯಸುತ್ತಿಲ್ಲ. ಹೀಗಾಗಿ ರೈತರ ಹಿತಕ್ಕೆ ತಕ್ಕಂತೆ ಸರ್ಕಾರ ವರ್ತಿಸಬೇಕು ಎಂದು ಅವರು ಹೇಳಿದರು
ಅಖಂಡ ಶ್ರೀನಿವಾಸ ಮೂರ್ತಿ ಜೆಡಿಎಸ್ ಸೇರ್ಪಡೆ:
ಎರಡು ಬಾರಿ ಶಾಸಕರಾಗಿ ಗೆದ್ದಿರುವ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಇಂದು ಬೆಳಗ್ಗೆ ಭೇಟಿ ನೀಡಿದ್ದೆ. ಇದೊಂದು ಗೌರವಪೂರ್ವಕ ಭೇಟಿ ಎಂದ ಅವರು, ಜೆಡಿಎಸ್ ಸೇರಲು ಅವರು ಉತ್ಸುಕರಾಗಿದ್ದಾರೆ. ಸದ್ಯದಲ್ಲೇ ದಿನಾಂಕ ನಿಗದಿ ಮಾಡಿ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.
ಪಕ್ಷದ ಕಚೇರಿಗೆ ಆಗಮಿಸುವುದಕ್ಕೂ ಮುನ್ನ ಕುಮಾರಸ್ವಾಮಿ, ಬೆಂಗಳೂರಿನ ಕಾವಲ್ ಭೈರಸಂದ್ರದಲ್ಲಿರುವ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಭೇಟಿ ನೀಡಿದ್ದರು. ಸುಮಾರು ಒಂದು ಗಂಟೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಹೆಚ್.ಎಮ್. ರಮೇಶ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ ಸೇರಿದಂತೆ ಅನೇಕ ಮುಖಂಡರು ಇದ್ದರು.