2026-05-20 12:18:42

ಕ್ಷಣ ಮಾತ್ರದಲ್ಲಿ 3 ಕೋಟಿ ರೂ. ಮೌಲ್ಯ ಚಿನ್ನಾಭರಣ ಕಳವುಬೇಸ್ತು ಬಿದ್ದ ಮಾಲೀಕ|Speed News Kannada

ಕ್ಷಣ ಮಾತ್ರದಲ್ಲಿ 3 ಕೋಟಿ ರೂ. ಮೌಲ್ಯ ಚಿನ್ನಾಭರಣ ಕಳವುಬೇಸ್ತು ಬಿದ್ದ ಮಾಲೀಕ|Speed News Kannada

ಬೆಂಗಳೂರು:  ಹೋಲ್‌ಸೇಲ್ ದರದಲ್ಲಿ ಚಿನ್ನ ಖರೀದಿಸುವ ನೆಪದಲ್ಲಿ 3 ಕೋಟಿ ರೂ. ಮೌಲ್ಯದ 1.850 ಕೆಜಿ  ಚಿನ್ನಾಭರಣಗಳನ್ನು ದೋಚಿರುವ ಪ್ರಕರಣ ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ನಡೆದಿದೆ. ನಗರ್ತ ಪೇಟೆಯಲ್ಲಿರುವ ಮೆಹ್ತಾ ಜ್ಯುವೆಲ್ಲರಿ ಶಾಪ್ ಮಾಲೀಕರನ್ನು ವಂಚಿಸಿ ಆರೋಪಿಗಳು ಪರಾರಿಯಾಗಿದ್ದಾರೆ.

 ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಉದ್ಯಮಿಯೊಬ್ಬರಿಗೆ ಭಾರಿ ವಂಚನೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಗರದ ಮಲ್ಲೇಶ್ವರಂನ ಸಂಪಿಗೆ ರಸ್ತೆಯಲ್ಲಿ ಈ ಹೈಟೆಕ್ ಕಳ್ಳತನ ನಡೆದಿದ್ದು, ವಂಚಕರು ಬರೋಬ್ಬರಿ 3 ಕೋಟಿ ರೂ. ಮೌಲ್ಯದ 1 ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗರ್ತ ಪೇಟೆಯಲ್ಲಿರುವ ಪ್ರಸಿದ್ಧ ಮೆಹ್ತಾ ಜ್ಯುವೆಲ್ಲರಿ ಶಾಪ್ ಮಾಲೀಕರು ದೂರು ಸಲ್ಲಿಸಿದ್ದಾರೆ.

ಮೋಸ ಹೋಗಿದ್ದು ಹೇಗೆ?

ಮೆಹ್ತಾ ಜ್ಯುವೆಲ್ಲರಿ ಮಾಲೀಕರಿಗೆ ಪರೇಶ್ ಸೋನಿ ಎಂಬ ವ್ಯಕ್ತಿ ಕರೆ ಮಾಡಿ, ತಮ್ಮ ಒಡೆತನದ ಮಾಹಿ ಎಂಟರ್‌ಪ್ರೈಸಸ್ ಗೆ ಹೋಲ್‌ಸೇಲ್ ದರದಲ್ಲಿ ಭಾರಿ ಪ್ರಮಾಣದ ಆಭರಣಗಳು ಬೇಕಾಗಿವೆ ಎಂದು ನಂಬಿಸಿ ತನ್ನ ಕಚೇರಿಗೆ ಕರೆಸಿಕೊಂಡಿದ್ದ. ಆತ ತನಗೂ ಮತ್ತು ತನ್ನ ವ್ಯವಹಾರಕ್ಕೂ ಯಾವುದೇ ಸಂಬಂಧವಿಲ್ಲದ ಮಲ್ಲೇಶ್ವರಂನ ಕಚೇರಿಯೊಂದರ ಬಾಗಿಲಿನ ಮೇಲೆ ‘ಲೋಟಸ್ ಜ್ಯುವೆಲ್ಲರಿ’ ಮತ್ತು ‘ಮಾಹಿ ಎಂಟರ್‌ಪ್ರೈಸಸ್’ ಎಂದು ನಕಲಿ ಬೋರ್ಡ್ ತಗುಲಿ ಹಾಕಿದ್ದ. ಇದನ್ನು ನಂಬಿದ ಮೆಹ್ತಾ ಜ್ಯುವೆಲ್ಲರಿ ಮ್ಯಾನೇಜರ್, ಮಾಲೀಕರ ಸೂಚನೆಯಂತೆ ಬರೋಬ್ಬರಿ 3 ಕೆಜಿ ಚಿನ್ನಾಭರಣಗಳನ್ನು ತೆಗೆದುಕೊಂಡು ಮಲ್ಲೇಶ್ವರಂ ಸಂಪಿಗೆ ರಸ್ತೆಯಲ್ಲಿದ್ದ ಪರೇಶ್ ಸೋನಿ ಕಚೇರಿಗೆ ಹೋಗಿದ್ದರು. ಮ್ಯಾನೇಜರ್ ತಂದ ಆಭರಣಗಳನ್ನು ಅವುಗಳ ವಿನ್ಯಾಸ ಪರಿಶೀಲಿಸುವ ನಾಟಕವಾಡಿ ಪಕ್ಕದ ಕ್ಯಾಬಿನ್‌ನಲ್ಲಿ ಕುಳಿತಿದ್ದ ತನ್ನ ಸಹಚರ ಚಂದ್ರಶೇಖರ್ ಎಂಬಾತನಿಗೆ ಆಭರಣಗಳ ಪಟ್ಟಿ ಮಾಡುವಂತೆ ಸೂಚಿಸಿದ್ದ. ಆಭರಣಗಳ ಫೋಟೋ ತೆಗೆಯುವ ನೆಪದಲ್ಲಿ ಪಕ್ಕದ ಕೋಣೆಗೆ ಹೋದ ಆರೋಪಿಗಳು ಅಲ್ಲಿಂದಲೇ ಚಿನ್ನದೊಂದಿಗೆ ಮತ್ತೊಂದು ಬಾಗಲಿ ಮೂಲಕ ಪರಾರಿಯಾಗಿದ್ದಾರೆ. ಒಳಗೆ ಹೋದವರು ಎಷ್ಟು ಹೊತ್ತಾದರೂ ಬಾರದೇ ಇದ್ದಾಗ ಅನುಮಾನಗೊಂಡು ಮ್ಯಾನೇಜರ್ ಪರಿಶೀಲಿಸಿದಾಗ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ಯಾಮ್, ರಾಮಚಂದ್ರ ಹಾಗೂ ಪರೇಶ್ ಸೋನಿ ಎಂಬುವವರ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಆಧಿರಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.