ನವದೆಹಲಿ: ದೇಶದಲ್ಲಿ ಇ-ಫಾರ್ಮಸಿ ಹಾಗೂ ಆನ್‌ಲೈನ್ ಮೂಲಕ ಔಷಧ ಮಾರಾಟವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ದೇಶದಾದ್ಯಂತ ಇಂದು ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘ ಒಂದು ದಿನದ ಬಂದ್ಗೆ ಕರೆ ನೀಡಿದೆ. ದೇಶದ 12.4 ಲಕ್ಷಕ್ಕೂ ಹೆಚ್ಚು ಮೆಡಿಕಲ್ ಸ್ಟೋರ್ ಗಳನ್ನು ಪ್ರತಿನಿಧಿಸುವ ‘ಅಖಿಲ ಭಾರತ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಸಂಘಟನೆ’ ಈ ಬಂದ್ ಗೆ ಕರೆ ನೀಡಿದೆ.
ಕರ್ನಾಟಕ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ ಸಂಘ(ಕೆಸಿಡಿಎ)ದ ಅಧ್ಯಕ್ಷ ಆರ್. ರಘುನಾಥ ರೆಡ್ಡಿ ಪ್ರತಿಕರಿಯೆ ನೀಡಿದ್ದು, ಬೆಂಗಳೂರಿನ ಸುಮಾರು 6,500 ಮೆಡಿಕಲ್ ಸ್ಟೋರ್ ಸೇರಿದಂತೆ ರಾಜ್ಯದ ಸುಮಾರು 26,000 ಮೆಡಿಕಲ್ ಶಾಪ್ ಗಳು ಬಂದ್ ಆಗಲಿವೆ ಎಂದು ತಿಳಿಸಿದ್ದಾರೆ.
ಔಷಧಿಗಳ ಅಕ್ರಮ ಆನ್‌ಲೈನ್ ಮಾರಾಟ ಮತ್ತು ಕಾರ್ಪೊರೇಟ್ ಸಂಸ್ಥೆಗಳ "ವೃತ್ತಿಪರವಲ್ಲದ ಸ್ಪರ್ಧೆ"ಯಿಂದ ಅನಾನುಕೂಲವಾಗುತ್ತಿದೆ. ಇ-ಫಾರ್ಮಸಿ ಕಾರ್ಯಾಚರಣೆಗೆ ಅನುಮತಿ ನೀಡುವ 2018ರ ಜಿಎಸ್‌ಆರ್ 817 (ಇ) ಅಧಿಸೂಚನೆಯನ್ನು ತಕ್ಷಣವೇ ಹಿಂಪಡೆಯಬೇಕು. ಕೋವಿಡ್-19 ಅವಧಿಯಲ್ಲಿ ಮನೆಬಾಗಿಲಿಗೆ ಔಷಧಿ ತಲುಪಿಸಲು ಅನುಮತಿ ನೀಡಿದ್ದ ಜಿಎಸ್‌ಆರ್ 220 (ಇ) ಆದೇಶವನ್ನು ರದ್ದುಗೊಳಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
ಆದರೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಂದ್ ಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಕೇವಲ ನೈತಿಕ ಬೆಂಬಲವನ್ನು ಮಾತ್ರ ಸೂಚಿಸುವುದಾಗಿ ಜಿಲ್ಲಾ ಸಂಘಗಳು ತಿಳಿಸಿವೆ.