ನವದೆಹಲಿ: ಬೆಂಗಳೂರಿನಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಯೋಜನೆಗೆ ತಿಲಾಂಜಲಿ ಹಾಡಲಾಗಿದೆಯೇ? ಇಂತಹುದ್ದೊಂದು ಸುದ್ದಿ ರಾಜಕೀವ ವಲಯಗಳಲ್ಲಿ ಹರಿದಾಡುತ್ತಿದೆ. ಬೆಂಗಳೂರು ಸೆಂಟ್ರಲ್ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಅವರು ಕೇಂದ್ರ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು ಹೇಳಿದ್ದರೆ ಬೆಂಗಳೂರು ಉಸ್ತುವಾರಿ ವಹಿಸಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈ ವಿಷಯ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಹೆಬ್ಬಾಳದಿಂದ ಸರ್ಜಾಪುರವರೆಗೆ 28,405 ಕೋಟಿ ರೂ.ಗಳ ವೆಚ್ಚದಲ್ಲಿ ಡಬಲ್ ಡೆಕ್ಕರ್ ಮೆಟ್ರೋ ಯೋಜನೆ ಕಾರ್ಯಗತಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿತ್ತು. ಆದರೆ ಕೇಂದ್ರ ಸರ್ಕಾರ ಈ ಯೋಜನೆಗೆ ಅನುಮತಿ ನೀಡಿಲ್ಲ ಎಂದು ಮೋಹನ್ ಅವರು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಈ ಯೋಜನೆ ಕೆಲವು ಭಾಗಗಳಲ್ಲಿ ಉತ್ತಮವಾದರೂ ಕೆಲವು ಪ್ರದೇಶಗಳಲ್ಲಿ ಅಡ್ಡಿ ಆತಂಕಗಳನ್ನುಂಟು ಮಾಡಲಿದೆ. ಡಬಲ್ ಡೆಕ್ಕರ್ ಗೆ ಪರ್ಯಾಯವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಷ್ಟ ಎಂದು ಹೇಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನನಗೆ ಈ ವಿಷಯ ಗೊತ್ತಿಲ್ಲ. ಬೆಂಗಳೂರಿನಲ್ಲಿ ಈಗಾಗಲೇ ನಿರ್ಮಾಣವಾಗಿರುವ ಡಬಲ್ ಡೆಕ್ಕರ್ ಮೆಲ್ಸೇತುವೆಯನ್ನು ಸ್ವತಃ ಪ್ರಧಾನಮಂತ್ರಿಗಳು ನೋಡಿದ್ದಾರೆ. ಈ ಯೋಜನೆ ಗೆ ಮೆಟ್ರೋ ಸಂಸ್ಥೆ 50% ಅನುದಾನ ಹಾಕಿದರೆ, ಕರ್ನಾಟಕ ಸರ್ಕಾರ (ಜಿಬಿಎ) 50% ಅನುದಾನ ಭರಿಸಲಿದೆ. ರಸ್ತೆ ಅಗಲೀಕರಣ ಕಷ್ಟವಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೊಳಿಸುತ್ತಿದ್ದೇವೆ. ಕೇಂದ್ರ ಸರ್ಕಾರವೇ ಈ ಯೋಜನೆ ಕೈಗೊಳ್ಳುವಂತೆ ಹೇಳಿದ್ದು, ಅದನ್ನು ಮುಂದುವರಿಸುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದಾರೆ. ಡಬಲ್ ಡೆಕ್ಕರ್ ನಿಂದ ಮೆಟ್ರೋ ರೈಲಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತಾರೆ ಎಂಬ ಬಗ್ಗೆ ಉತ್ತರಿಸಿ, ರಸ್ತೆಯಲ್ಲಿ ಓಡಾಡುವ ಪ್ರಯಾಣಿಕರೇ ಬೇರೆ, ಮೆಟ್ರೋ ಬಳಸುವ ಪ್ರಯಾಣಿಕರೇ ಬೇರೆ. ಒಂದು ವೇಳೆ ಈ ಯೋಜನೆಯಲ್ಲಿ ನೂನ್ಯತೆಗಳಿದ್ದರೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚೆ ಮಾಡುವುದಾಗಿ ಶಿವಕುಮಾರ್ ಹೇಳಿದ್ದಾರೆ.