ನವದೆಹಲಿ: ಬೆಳಗಾವಿ ಲೋಕಸಭಾ ವ್ಯಾಪ್ತಿಯಡಿ ಒದಗಿಸಬಹುದಾದ ರೈಲು ಸೇವೆಗಳನ್ನು ಕುರಿತು ಲೋಕಸಭಾ ಸದಸ್ಯ ಜಗದೀಶ ಶೇಟ್ಟರ್ ಅವರು ಇಂದು ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಇತ್ತೀಚೆಗೆ ಮಂಡಿಸಲಾದ ಕೇಂದ್ರ ಬಜೆಟ್: 2026-27 ದೇಶದ ಹೈಸ್ಪೀಡ ರೈಲು ಕಾರಿಡಾರ್ ಯೋಜನೆಯಡಿ ಏಳು ನಗರಗಳಿಗೆ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ಬೆಂಗಳೂರು - ಬೆಳಗಾವಿ - ಮುಂಬೈ ನಡುವೆಯೂ ಸಹ ಎಂಟನೆಯ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯ ವ್ಯಾಪ್ತಿಗೆ ಸೇರಸಲು ಮನವಿ ಮಾಡಿಕೊಂಡರು. ಇದರಿಂದ ಈ ಮಾರ್ಗದಲ್ಲಿ ಬರುವಂತಹ ಸಣ್ಣ ಮತ್ತು ಮಧ್ಯಮ ನಗರಗಳೂ ಸಹ ಅಭಿವೃದ್ಧಿ ಹೊಂದಲೊಂದು ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯ ಪರಕನಟ್ಟಿ, ಗೋಕಾಕ ಶಹರ ಮತ್ತು ಯಾದವಾಡ ಮಾರ್ಗವಾಗಿ ಬಾಗಲಕೋಟೆ ನಗರಕ್ಕೆ ಹೊಂದಿಕೊಂಡು ಸಹ ನೂತನ ರೈಲು ಮಾರ್ಗ ನಿರ್ಮಾಣ ಮಾಡಲು ಕೋರಲಾಯಿತು. ಈ ಮಾರ್ಗದಲ್ಲಿ ಹಲವಾರು ಸಿಮೆಂಟ್ ಮತ್ತು ಶೂಗರ್ ಫ್ಯಾಕ್ಟರಿಗಳು ಇದ್ದು ಈ ಮಾರ್ಗ ನಿರ್ಮಾಣವಾದಲ್ಲಿ ಸಾರ್ವಜನಿಕರಿಗೆ ಸಂಚರಿಸಲು ತುಂಬಾ ಸಹಕಾರಿಯಾಗಲಿದೆ. ಈಗ ಚಾಲನೆಯಲ್ಲಿರುವ ಬೆಳಗಾವಿ - ಬೆಂಗಳೂರು ವಂದೇ ಭಾರತ ಎಕ್ಸಪ್ರೆಸ್ ರೈಲು ಬೆಳಗಾವಿಯಿಂದ ಬೆಳ್ಳಿಗ್ಗೆ 05:35 ಕ್ಕೆ ಹೊರಡುತ್ತದೆ ಈ ಸಂಚಾರ ಸಮಯವನ್ನು 06:15 ಕ್ಕೆ ಬದಲಾವಣೆ ಮಾಡಿದ್ದಲ್ಲಿ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗುವುದು ಎಂದು ಕೇಂದ್ರ ಸಚಿವರಿಗೆ ತಿಳಿಸಲಾಯಿತು.
ಶೀಘ್ರದಲ್ಲಿ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಸ್ಪಷ್ಟ ಭರವಸೆಯನ್ನು ಕೇಂದ್ರ ರೇಲ್ವೆ ಸಚಿವರು ನೀಡಿದ್ದಾರೆ ಎಂದು ಶೆಟ್ಟರ್ ಅವರು ತಿಳಿಸಿದ್ದಾರೆ.