2026-06-06 11:26:11

ನಿಮ್ಮ ಆದ್ಯತೆಗಳು ನಿಮ್ಮನ್ನು ಬೆತ್ತಲೆ ಮಾಡಿವೆ; ಸಿಎಂ ಶಿವಕುಮಾರ್‌ ವಿರುದ್ಧ ಆರ್. ಅಶೋಕ್‌ ವಾಗ್ದಾಳಿ|Speed News Kannada

ನಿಮ್ಮ ಆದ್ಯತೆಗಳು ನಿಮ್ಮನ್ನು ಬೆತ್ತಲೆ ಮಾಡಿವೆ; ಸಿಎಂ ಶಿವಕುಮಾರ್‌ ವಿರುದ್ಧ ಆರ್. ಅಶೋಕ್‌ ವಾಗ್ದಾಳಿ|Speed News Kannada

ಬೆಂಗಳೂರು; ಸರ್ಕಾರದ ಖಾತೆ ಹಂಚಿಕೆ ಪ್ರಹಸನ, ಕಾಂಗ್ರೆಸ್ ಪಕ್ಷದ ನಿಜವಾದ ಆದ್ಯತೆಗಳೇನು ಅನ್ನುವುದನ್ನು ರಾಜ್ಯದ ಜನರ ಮುಂದೆ ಸಂಪೂರ್ಣವಾಗಿ ಬೆತ್ತಲು ಮಾಡಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್‌ ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಒಂದು ಕಡೆ ರಾಜ್ಯದ ಬೆನ್ನೆಲುಬಾದ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವ ಈ ಅತ್ಯಂತ ಮಹತ್ವದ ಸಮಯದಲ್ಲಿ ಕರ್ನಾಟಕಕ್ಕೆ ಒಬ್ಬ ಪೂರ್ಣಾವಧಿ ಕೃಷಿ ಸಚಿವರೇ ಇಲ್ಲ. ಬಿತ್ತನೆ ಬೀಜಗಳ ಲಭ್ಯತೆ, ರಸಗೊಬ್ಬರಗಳ ಪೂರೈಕೆ, ಬೆಳೆ ಸಾಲ, ಬೆಳೆ ವಿಮೆ, ಮಳೆ ಪರಿಸ್ಥಿತಿಯ ಅವಲೋಕನ, ಇವೆಲ್ಲದರ ಬಗ್ಗೆ ಕಾಳಜಿ ವಹಿಸಬೇಕಾದ ಕೃಷಿ ಇಲಾಖೆ ಈಗ ಸಚಿವರಿಲ್ಲದೆ ಅನಾಥವಾಗಿದೆ.

ಮತ್ತೊಂದು ಕಡೆ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಮಳೆ ಬಂದರೆ ಸೋರುವ ಕೊಠಡಿಗಳು, ಕುಸಿಯುವ ಗೋಡೆಗಳು ದುರಸ್ತಿಗಾಗಿ ಕಾಯುತ್ತಿವೆ, ಶೌಚಾಲಯಗಳ ಕೊರತೆ ಹಾಗೇ ಇವೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ, ಶಿಕ್ಷಕರ ಕೊರತೆ ನೀಗಿಸುವ ನೂರಾರು ತುರ್ತು ಸವಾಲುಗಳಿ ಬೆಟ್ಟದಷ್ಟಿವೆ. ಆದರೆ ರಾಜ್ಯಕ್ಕೆ ಒಬ್ಬ ಶಿಕ್ಷಣ ಸಚಿವರೇ ಗತಿಯಿಲ್ಲ.

ಕಾಂಗ್ರೆಸ್ ನಾಯಕರ ಕಣ್ಣಿರುವುದು ಕೇವಲ ಲೂಟಿ ಹೊಡೆಯುವ ಖಾತೆಗಳ ಮೇಲೆ ಮಾತ್ರ!

ರೈತರು, ವಿದ್ಯಾರ್ಥಿಗಳ ಕಷ್ಟ ಇವರಿಗೆ ಬೇಕಾಗಿಲ್ಲ. ಸಾವಿರಾರು ಕೋಟಿ ರೂಪಾಯಿಗಳ ಸಂಪನ್ಮೂಲ, ಗುತ್ತಿಗೆ ಮತ್ತು ಕಮಿಷನ್ ದಂಧೆಗೆ ಅನುಕೂಲವಾಗುವ ಖಾತೆಗಳಿಗಾಗಿ ಮಾತ್ರ ಕಾಂಗ್ರೆಸ್ ನಾಯಕರ ನಡುವೆ ರಣಹದ್ದುಗಳಂತೆ ಭಾರೀ ಪೈಪೋಟಿ ನಡೆಯುತ್ತಿದೆ. ಸಿಎಂ @DKShivakumar, ಅವರೇ ಇದೇನಾ ನಿಮ್ಮ ಜನಪರ ಆಡಳಿತ?

ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಕಾಂಗ್ರೆಸ್ ಹೈಕಮಾಂಡ್ ಒಬ್ಬ ಸಮರ್ಥ ಸಚಿವರಿಗೆ ಕೊಟ್ಟಿದೆ ಎಂದು ಡಂಗುರ ಸಾರುತ್ತಾರೆ. ಆದರೆ ನಗರದ ಯೋಜನೆ ಮತ್ತು ಅಭಿವೃದ್ಧಿಗೆ ಅತ್ಯಂತ ಮಹತ್ವವಾಗಿರುವ BDA ಮತ್ತು BMRDA ಅನ್ನು ಮುಖ್ಯಮಂತ್ರಿಗಳೇ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ! ಹಾಗಿದ್ದರೆ ಸಚಿವರ ಬಳಿ ಉಳಿದಿರುವುದು ಏನು? ಈ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಎಂಬುದು ಅಭಿವೃದ್ಧಿಗಾಗಿ, ಆಡಳಿತಕ್ಕಾಗಿ ಮಾಡಿರುವ ವ್ಯವಸ್ಥೆಯಲ್ಲ, ಬದಲಿಗೆ ಸಂಪನ್ಮೂಲ ಹಂಚಿಕೆಗೆ, ರಾಜ್ಯದ ಜನರ ತೆರಿಗೆ ಹಣವನ್ನ ಲೂಟಿ ಮಾಡಲು ಮಾಡಿದ ರಾಜಕೀಯ ಹೊಂದಾಣಿಕೆ.

ಕಳೆದ ಹಲವು ವಾರಗಳಿಂದ ಇಡೀ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಕಾಂಗ್ರೆಸ್‌ನ ಒಳಜಗಳ, ಅಧಿಕಾರದ ಕಿತ್ತಾಟ ಮತ್ತು ಹುದ್ದೆಗಳ ಹಂಚಿಕೆಯ ರಾಜಕಾರಣಕ್ಕೆ ರಾಜ್ಯದ ಜನತೆ ಬಲಿಯಾಗುತ್ತಿದ್ದಾರೆ. ಇವರಿಗೆ:

ರೈತರ ಸಮಸ್ಯೆಗಳಿಗೆ ಸಮಯವಿಲ್ಲ!

ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಮಯವಿಲ್ಲ!

ಶಾಲೆಗಳ ದುರಸ್ತಿಗೆ, ಪಠ್ಯಪುಸ್ತಕ ವಿತರಣೆಗೆ ಸಮಯವಿಲ್ಲ!

ಬೆಂಗಳೂರಿನ ಅವ್ಯವಸ್ಥೆ ಸುಧಾರಿಸುವ ಉದ್ದೇಶವಿಲ್ಲ.

ಆದರೆ... ಯಾರಿಗೆ ಯಾವ ಖಾತೆ, ಯಾರಿಗೆ ಎಷ್ಟು ಅಧಿಕಾರ, ಯಾರಿಗೆ ಎಷ್ಟು ಸಂಪನ್ಮೂಲ, ಯಾರಿಗೆ ಎಷ್ಟು ಲೂಟಿಯ ಅವಕಾಶ ಎಂಬ ಲೆಕ್ಕಾಚಾರ ಮಾತ್ರ ಕಾಂಗ್ರೆಸ್ ನಾಯಕರ ಏಕೈಕ ಅಜೆಂಡಾ ಆಗಿದೆ.

ಈ ಖಾತೆ ಹಂಚಿಕೆ ಒಂದು ವಿಷಯವನ್ನು ಸ್ಪಷ್ಟಪಡಿಸಿದೆ - ಈ ಸರ್ಕಾರದ ಮೊದಲ ಆದ್ಯತೆ ರೈತನಲ್ಲ, ವಿದ್ಯಾರ್ಥಿಯಲ್ಲ, ಜನಸಾಮಾನ್ಯರಲ್ಲ ರಾಜ್ಯದ ಅಭಿವೃದ್ಧಿಯೂ ಅಲ್ಲ. ಈ ಸರ್ಕಾರದ ಪ್ರಥಮ ಆದ್ಯತೆ: ಅಧಿಕಾರ, ಸಂಪನ್ಮೂಲ ಮತ್ತು ಲೂಟಿ!

ಈ ಲಜ್ಜೆಗೆಟ್ಟ ಅಧಿಕಾರ ದಾಹವನ್ನ ಸೂಕ್ಷ್ಮವಾಗಿ ಗಮನಿಸುತ್ತಿರುವ ಕರ್ನಾಟಕದ ಜನತೆ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ಮಾತ್ರ ನೂರಕ್ಕೆ ನೂರು ಪರ್ಸೆಂಟ್ ಗ್ಯಾರೆಂಟಿ ಎಂದು ಟೀಕಿಸಿದ್ದಾರೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.