ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡು ಬ್ರೆಜಿಲ್ ಪ್ರಜೆಯೊಬ್ಬರನ್ನು ಬಂಧಿಸಲಾಗಿದೆ.
ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ (ಎನ್ ಬಿ) ಬೆಂಗಳೂರು ವಲಯ ಘಟಕದ ಅಧಿಕಾರಿಗಳು ಫೆಬ್ರವರಿ 17ರಂದು ನಡೆಸಿದ ಕಾರ್ಯಾಚರಣೆ ವೇಳೆ ಬಂಧಿತ ಆರೋಪಿಯಿಂದ 4.776 ಕೆಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದ್ದು ಇದರ ಅಂದಾಜು ಮೌಲ್ಯ 23.88 ಕೋಟಿ ರೂ.ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿ ಸಾವೊ ಪಾಲೊದಿಂದ ಕತಾರ್‌ನ ದೋಹಾಗೆ ಪ್ರಯಾಣಿಸಿ, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಚೆಕ್-ಇನ್ ಮಾಡಿದ ಸಾಮಾನುಗಳನ್ನು ಪರಿಶೀಲಿಸುವಾಗ ನಾಲ್ಕು ಮಹಿಳೆಯರ ಕೈಚೀಲಗಳಲ್ಲಿ ಸಂಗ್ರಹಿಸಿದ್ದ ಕೊಕೇನ್ ಪತ್ತೆಯಾಗಿದೆ ಎಂದು ಎನ್‌ಸಿಬಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಪರಿಶೀಲನೆಯ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ ಚೀಲಗಳನ್ನು ತೆರೆದು ನೋಡಿದಾಗ ಮಾದಕ ವಸ್ತು ದೊರೆತಿದೆ.
ಡ್ರಗ್ಸ್ ಕಳ್ಳಸಾಗಣೆ ಪ್ರಯತ್ನದ ಮೂಲ ಮತ್ತು ಗಮ್ಯಸ್ಥಾನದ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ (NDPS) ಅಡಿಯಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಎನ್ ಸಿಬಿ ತಿಳಿಸಿದೆ.ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಎನ್‌ಸಿಬಿ ಅಧಿಕಾರಿಗಳು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ.