ಬೆಂಗಳೂರು: ನಾಳೆ, ಗುರುವಾರ ಎಲ್ಲವನ್ನೂ ಮಾತಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಜವಹರಲಾಲ್ ನೆಹರು ಪುಣ್ಯ ಸ್ಮರಣೆ ಅಂಗವಾಗಿ ವಿಧಾನಸೌಧದಲ್ಲಿರುವ ಜವಾಹರಲಾಲ್ ನೆಹರು ಅವರ ಪ್ರತಿಮೆಗೆ ನಮಿಸಿ ಅವರ ಭಾವಚಿತ್ರಕ್ಕೆ ಸಿದ್ದರಾಮಯ್ಯ ಪುಷ್ಪ ನಮನ ಸಲ್ಲಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಸಿಎಂ ನಿವಾಸಕ್ಕೆ ಸಚಿವರು, ಶಾಸಕರ ಭೇಟಿ:
ಈ ಮಧ್ಯೆ ಸಿದ್ದರಾಮಯ್ಯ ಅವರ ರಾಜೀನಾಮೆ ನೀಡುವುದು ಖಚಿತವಾಗುತ್ತಿದ್ದಂತೆ ಅವರ ನಿವಾಸಕ್ಕೆ ಸಚಿವರು ಶಾಸಕರು ದೌಡಾಯಿಸುತ್ತಿದ್ದಾರೆ. ಸಚಿವರಾದ ಎಚ್. ಸಿ. ಮಹದೇವಪ್ಪ, ಜಮೀರ್ ಅಹಮದ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಶಾಸಕರಾದ ನಂಜೇಗೌಡ, ಬಿ.ನಾಗೇಂದ್ರ, ಉಮೇಶ್ ಮೇಟಿ, ಆರ್ ವಿ ದೇಶಪಾಂಡೆ, ಎ.ಎಸ್.ಪೊನ್ನಣ್ಣ, ಪರಿಷತ್ ಸದಸ್ಯರಾದ ಸಲೀಂ ಅಹಮದ್, ರಾಜೇಂದ್ರ ರಾಜಣ್ಣ ಭೇಟಿ ನೀಡಿದರು. ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರೂ ಭೇಟಿ ನೀಡಿದ್ದು ಕುತೂಹಲ ಮೂಡಿಸಿತು.
ಬಲ್ಲ ಮೂಗಳ ಪ್ರಕಾರ ನಾಳೆ ಲೋಕಭವನಕ್ಕೆ ತೆರಳಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಶುಕ್ರವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಅಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.