2026-07-05 11:14:27

MP Sudhakar is an immature politician | ಜಾತಿಯ ಆಶ್ರಯ ಪಡೆಯುವವನೇ ಅಪ್ರಬುದ್ಧ ರಾಜಕಾರಣಿ ಸಂಸದ ಸುಧಾಕರ್ | SNK

MP Sudhakar is an immature politician | ಜಾತಿಯ ಆಶ್ರಯ ಪಡೆಯುವವನೇ ಅಪ್ರಬುದ್ಧ ರಾಜಕಾರಣಿ ಸಂಸದ ಸುಧಾಕರ್ | SNK

ಚಿಕ್ಕಬಳ್ಳಾಪುರ: "ತನ್ನ ಸ್ವಂತ ಸಾಮರ್ಥ್ಯದ ಮೇಲೆ ವಿಶ್ವಾಸವಿಲ್ಲದ ರಾಜಕಾರಣಿ ಮಾತ್ರ ರಾಜಕೀಯ ಉಳಿವಿಗಾಗಿ ಜಾತಿಯ ಆಶ್ರಯ ಪಡೆಯಲು ಮುಂದಾಗುತ್ತಾನೆ" ಎಂದು ಸಂಸದ ಡಾ. ಕೆ. ಸುಧಾಕರ್ ಅವರು ಶಾಸಕ ಪ್ರದೀಪ್ ಈಶ್ವರ್ (Pradeep Eshwar ) ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೆಂಪೇಗೌಡ ಜಯಂತಿ ವೇಳೆ ನಡೆದ ಚಪ್ಪಲಿ ಎಸೆತದ ಗಲಾಟೆಗೆ ಸುಧಾಕರ್ ಅವರೇ ಕಾರಣ ಎಂದು ಬಲಿಜ ಸಮುದಾಯದ ಕೆಲವರು ಎಸ್‌ಪಿಗೆ ದೂರು ನೀಡಿದ್ದಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಬಳ್ಳಾಪುರದ ತಮ್ಮ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಜಾತಿಯನ್ನು ರಕ್ಷಣಾ ಕವಚವಾಗಿ ಬಳಸಬಾರದು ಎಂದರು. ಬಲಿಜ ಸಮುದಾಯದ ಎಲ್ಲ ಜನರೂ ನನ್ನ ವಿರುದ್ಧವಾಗಿಲ್ಲ, ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ರಾಜಕೀಯ ಪ್ರೇರಿತರಾಗಿ ಹೇಳಿಕೆ ನೀಡುತ್ತಿದ್ದಾರೆ. ಕ್ಷೇತ್ರದ ಎಲ್ಲಾ ವರ್ಗದ ಜನರ ವಿಶ್ವಾಸ ಮತ್ತು ಸಹೋದರತ್ವದ ಬೆಂಬಲ ಸದಾ ತಮ್ಮೊಂದಿಗಿದೆ ಎಂದು ಸಂಸದರು ಸ್ಪಷ್ಟಪಡಿಸಿದರು.

ಇದೇ ವೇಳೆ ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ಹುಂಡಿ ಹಣ ಕಳವು ಪ್ರಕರಣದ ಕುರಿತು ಮಾತನಾಡಿದ ಅವರು, ಈ ದುರದೃಷ್ಟಕರ ಘಟನೆಯನ್ನು ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಅಯೋಧ್ಯೆಯಲ್ಲಿ ನಡೆದಿರುವ ಕಳ್ಳತನದ ಕುರಿತು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ತನಿಖೆ ಕೈಗೊಂಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹಿಂದೆ ಶ್ರೀರಾಮ ಕಾಲ್ಪನಿಕ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ಕಾಂಗ್ರೆಸ್ ನಾಯಕರಿಗೆ ಈಗ ಇದ್ದಕ್ಕಿದ್ದಂತೆ ರಾಮನ ಮೇಲೆ ಭಕ್ತಿ ಉಕ್ಕಿ ಬರುತ್ತಿದೆ ಎಂದು ಸುಧಾಕರ್ ಲೇವಡಿ ಮಾಡಿದರು. ಮಂದಿರಕ್ಕೆ ಹೋಗದವರು ಈಗ ಆರ್‌ಎಸ್‌ಎಸ್ ಹಾಗೂ ಬಿಜೆಪಿ ವಿರುದ್ಧ ಟೀಕೆ ಮಾಡಲು ಈ ಘಟನೆಯನ್ನು ಬಳಸಿಕೊಳ್ಳುತ್ತಿದ್ದಾರೆ. ದೇಶದ ವಿವಿಧೆಡೆ ದೇವಾಲಯಗಳಲ್ಲಿ ಕಳ್ಳತನಗಳು ನಡೆದಿದ್ದು, ತನಿಖಾ ಸಂಸ್ಥೆಗಳು ನಿಭಾಯಿಸಲಿವೆ, ಹೀಗಾಗಿ ಕಾಂಗ್ರೆಸ್ ಇದರಲ್ಲಿ ರಾಜಕೀಯ ಮಾಡಬಾರದು ಎಂದು ಆಗ್ರಹಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.