2026-07-23 11:33:05

Will liquor baron Vijay Mallya return to India | ಮದ್ಯದೊರೆ ವಿಜಯ್ ಮಲ್ಯ ಭಾರತಕ್ಕೆ ಮರಳಲಿದ್ದಾರೆಯೇ ಕೋರ್ಟ್‌ ನಲ್ಲಿ ವಾದ ಹೇಗಿತ್ತು | Speed News Kannada

Will liquor baron Vijay Mallya return to India | ಮದ್ಯದೊರೆ ವಿಜಯ್ ಮಲ್ಯ ಭಾರತಕ್ಕೆ ಮರಳಲಿದ್ದಾರೆಯೇ ಕೋರ್ಟ್‌ ನಲ್ಲಿ ವಾದ ಹೇಗಿತ್ತು | Speed News Kannada

ಮುಂಬೈ: ನಾನು ಭಾರತಕ್ಕೆ ಯಾವಾಗ ಬರುತ್ತೇನೆ ಎಂದು ನಿರ್ದಿಷ್ಟವಾಗಿ ಹೇಳಲಾರೆ ಎಂದು ವಂಚನೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಗಳನ್ನು ಎದುರಿಸುತ್ತಿರುವ ಮದ್ಯ ದೊರೆ ವಿಜಯ್ ಮಲ್ಯ, ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಬ್ರಿಟನ್ ದೇಶವನ್ನು ಬಿಟ್ಟು ತೆರಳದಂತೆ ನನಗೆ ಕಾನೂನು ಪ್ರಕಾರ ನಿರ್ಬಂಧ ಹೇರಲಾಗಿದೆ ಎಂದೂ ಅವರು ಹೇಳಿದ್ದಾರೆ.
ಮುಂಬೈ ಹೈಕೋರ್ಟ್‌ ಗೆ ತಮ್ಮ ವಕೀಲ ಅಮಿತ್ ದೇಸಾಯಿ ಮೂಲಕ ನ್ಯಾಯಾಲಯಕ್ಕೆ ಈ ಹೇಳಿಕೆ ಸಲ್ಲಿಸಿರುವ ವಿಜಯ್‌ ಮಲ್ಯ, ನನ್ನ ಬಳಿ ಪಾಸ್‌ಪೋರ್ಟ್ ಇಲ್ಲ. ಅದನ್ನು ಭಾರತ ಸರ್ಕಾರಕ್ಕೆ ಮರಳಿಸಲಾಗಿದೆ. ಆದ್ದರಿಂದ ಭಾರತಕ್ಕೆ ಯಾವಾಗ ಬರುತ್ಥೆನೆ ಎಂದು ನಿರ್ದಿಷ್ಟ ದಿನಾಂಕವನ್ನು ಹೇಳಲಾರೆ ಎಂದಿದ್ದಾರೆ.
ತಮ್ಮನ್ನು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಅಪರಾಧಿ (ಪಿಎಂಎಲ್‌ಎ) ಎಂದು ಘೋಷಿಸಿರುವುದನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿರುವ ಅರ್ಜಿಯನ್ನು ಅವರು ಭಾರತಕ್ಕೆ ಮರಳದ ಹೊರತು ವಿಚಾರಣೆ ನಡೆಸುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್ ಮತ್ತು ನ್ಯಾ. ಗೌತಮ್ ಅಖಂಡ್ ಅವರನ್ನು ಒಳಗೊಂಡ ಪೀಠ ಕಳೆದ ವಾರ ತಿಳಿಸಿತ್ತು. 
ಭಾರತಕ್ಕೆ ಆಗಮಿಸುವ ಉದ್ದೇಶವಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸುವಂತೆಯೂ ಕೋರ್ಟ್ ಸೂಚಿಸಿತ್ತು. 70 ವರ್ಷದ ಮಲ್ಯ ಅವರು 2016ರಿಂದ ಬ್ರಿಟನ್‌ನಲ್ಲಿದ್ದಾರೆ. 
ವಿಜಯ್‌ ಮಲ್ಯ ಹಲವು ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲದ ಸುಸ್ಥಿದಾರರಾಗಿದ್ದಾರೆ ಮತ್ತು ಹಣ ಅಕ್ರಮ ವರ್ಗಾವಣೆಯ ಆರೋಪವನ್ನೂ ಎದುರಿಸುತ್ತಿದ್ದಾರೆ.
ಮಲ್ಯ ಪರ ವಕೀಲ ಅಮಿತ್ ದೇಸಾಯಿ ವಾದಿಸಿ ಈ ಪ್ರಕರಣಗಳ ವಿಚಾರಣೆಗೆ ಮಲ್ಯ ಅವರೇ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವ ಅಗತ್ಯವಿಲ್ಲ. ಅವರು ಬ್ರಿಟನ್‌ನಿಂದ ಹೊರಗೆ ತೆರಳುವುದಕ್ಕೆ ನಿರ್ಬಂಧ  ಹೇರಲಾಗಿದೆ ಎಂದು ಹೇಳಿದ್ದಾರೆ.  ಈ ಹೇಳಿಕೆ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಹೈಕೋರ್ಟ್, ಪ್ರಕರಣದ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿದೆ.
ಈ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯವು 2019ರ ಜನವರಿಯಲ್ಲಿ ಮಲ್ಯ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಗಳ ಅಪರಾಧಿ ಎಂದು ಘೋಷಿಸಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.