ಬೆಂಗಳೂರು:ಸರಣಿ ಟ್ವೀಟ್ ಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾರಿಗೆ ಉತ್ತರ ನೀಡಲು ಹೊರಟಿದ್ದಾರೆ ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾಜಿಕ ನ್ಯಾಯದ ಪರ ನಿಂತಿದ್ದು, ಕುರಿ ಕಾಯುವವ ಬಜೆಟ್ ಮಂಡಿಸಿದ್ದು, ಮೊದಲಾದ ಶೀರ್ಷಿಕೆಗಳ ಮೂಲಕ ಹಲವು ಟ್ವೀಟ್ ಗಳನ್ನು ಪೋಸ್ಟ್ ಮಾಡಿದ್ದಾರೆ.
ಸರ್ಕಾರದ ಕಡು ವಿರೋಧಿಗಳಾದ ಬಿಜೆಪಿ ಜೆಡಿಎಸ್ ಗೆ ತಿರುಗೇಟು ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ. ಮತ್ತೊಂದು ಗುಂಪು ಮುಖ್ಯಮಂತ್ರಿಯಾಗಲು ತುದಿಗಾಲಲ್ಲಿ ನಿಂತಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಎದಿರೇಟು ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಅಥವಾ ಎಲ್ಲರಿಗೂ ಸೇರಿಸಿಯೇ ಉತ್ತರ ನೀಡಿದ್ದಾರೆ ಎಂದೂ ಅಂದುಕೊಳ್ಳಬಹುದು. ಆದರೂ ತಕ್ಕಡಿ ಶಿವಕುಮಾರ್ ಅವರ ಕಡೆ ಹೆಚ್ಚು ತೂಗುತ್ತದೆ ಎನ್ನುವುದು ನಿರ್ವಿವಾದ.
ಅವರ ಟ್ವೀಟ್ ಗಳ ಕೊನೆಯ ತುಣುಕುಗಳು ಹೀಗಿವೆ.
ಈಗ ರಾಹುಲ್ ಗಾಂಧಿಯವರ ವಿರುದ್ಧವೂ ಸಂಚು ನಡೆಯುತ್ತಿದೆ. ಯಾವಾಗ ರಾಹುಲ್ ಗಾಂಧಿಯವರು ಜಾತಿ, ಮತ, ಪಂಥ, ವರ್ಗವನ್ನು ಮೀರಿ ಎಲ್ಲ ಭಾರತೀಯರನ್ನು ಜೋಡಿಸುವ ಕೆಲಸ ಶುರು ಮಾಡಿದರೋ, ಯಾವಾಗ ಅವರು ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎತ್ತಲು ಶುರುಮಾಡಿದರೋ, ಯಾವಾಗ ಅವರು ಜಾತಿಗಣತಿ ಬಗ್ಗೆ, ಮೀಸಲಾತಿ ಹೆಚ್ಚಳದ ಬಗ್ಗೆ ದನಿ ಎತ್ತಲು ಪ್ರಾರಂಭಿಸಿದರೋ ಅಂದಿನಿಂದ ಅವರನ್ನು ಹಣಿಯುವ ಕೆಲಸ ಜೋರಾಗಿ ನಡೆಯುತ್ತಿದೆ.
ಕಾಲ ಬದಲಾಗಿದೆ, ನಾವು ಮನುವಿನ ಕಾಲದಲ್ಲಿಯೂ ಇಲ್ಲ, ರಾಜ-ಮಹಾರಾಜರ ಗುಲಾಮರೂ ಅಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನಮಗಿರುವ ದೊಡ್ಡ ರಕ್ಷಣೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ.
ಅವಕಾಶ ವಂಚಿತರ ಪರ ನಿಂತವರನ್ನು ವರ್ತಮಾನವು ಕ್ರೂರವಾಗಿ ನಡೆಸಿಕೊಂಡಿದೆ:
ಸಾಮಾಜಿಕ ನ್ಯಾಯದ ಬಂಡಿಯನ್ನು ಮುಂದಕ್ಕೆ ಎಳೆದುಕೊಂಡು ಹೋಗುವುದು ಸುಲಭದ ಕೆಲಸ ಅಲ್ಲ ಎನ್ನುವುದನ್ನು ನಾನು ಅನುಭವದ ಮೂಲಕ ಅರಿತುಕೊಂಡಿದ್ದೇನೆ. ಈ ಪ್ರಯತ್ನ ನಡೆಸಿದವರೆಲ್ಲರನ್ನು ವರ್ತಮಾನ ಬಹಳ ಕ್ರೂರವಾಗಿ ನಡೆಸಿಕೊಂಡಿದೆ. ನಾನು ಸಾಮಾಜಿಕ ನ್ಯಾಯದ ಪರವಾಗಿ ದನಿ ಎತ್ತುವ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಮಾಡಿದಾಗೆಲ್ಲ ನನ್ನ ವಿರುದ್ಧ ದಾಳಿಗಳು ನಡೆದಿವೆ, ಇದು ಈಗಲೂ ಮುಂದುವರಿಯುತ್ತಿದೆ.
ನಾನು ಈ ರಾಜ್ಯದ ಬಡವರು, ಶೋಷಿತರು, ಅವಕಾಶ ವಂಚಿತರು,ಸಾಮಾಜಿಕ ನ್ಯಾಯ, ಸಂವಿಧಾನ ಪರವಗಿದ್ದೇನೆ. ಶೋಷಿತರ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದೇನೆ, ದುರ್ಬಲರಿಗೆ ಅನ್ಯಾಯವಾದಾಗ ದನಿ ಎತ್ತಿದ್ದೇನೆ. ಇದಕ್ಕಾಗಿ ರಾಜ್ಯದ ಜನತೆ 136 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಇದು ನಮ್ಮ ರಾಜಕೀಯ ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ.
ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನಬದ್ಧ ಕರ್ತವ್ಯ ನಿರ್ವಹಿಸಿದ್ದೇವೆ:
ಹಣಕಾಸು ಸಚಿವನಾಗಿ ನಾನು ಮಂಡಿಸಿರುವ ಹದಿನಾರು ಬಜೆಟ್ ಗಳನ್ನು ಅವಲೋಕಿಸಿದರೆ ನನ್ನ ಕಲ್ಪನೆಯ ಸಾಮಾಜಿಕ ನ್ಯಾಯದ ಪರಿಚಯ ಆಗುತ್ತದೆ. ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾದ ನಂತರದ ಈ ಮೂರು ವರ್ಷಗಳ ಅವಧಿಯಲ್ಲಿ ಸಾಮಾಜಿಕ ನ್ಯಾಯದ ಗಡಿರೇಖೆಗಳನ್ನು ಇನ್ನಷ್ಟು ವಿಸ್ತರಿಸುವ ಪ್ರಯತ್ನದ ಅಂಗವಾಗಿಯೇ ನಾವು ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ.
ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ನಮ್ಮ ಸರ್ಕಾರ ಸಂವಿಧಾನಬದ್ಧ ಕರ್ತವ್ಯವನ್ನಷ್ಟೇ ನಿರ್ವಹಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.