ಬೆಂಗಳೂರು: ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ರೂ. 400 ಇದ್ದ ಅಡುಗೆ ಅನಿಲ ಸಿಲಿಂಡರ್ ದರವನ್ನು ಅಲ್ಪಪ್ರಮಾಣದಲ್ಲಿ ಏರಿಕೆ ಮಾಡಿದ್ದಕ್ಕೆ ತಲೆಯ ಮೇಲೆ ಗ್ಯಾಸ್ ಸಿಲಿಂಡರ್ ಹೊತ್ತು ಪ್ರತಿಭಟನೆ ಮಾಡಿದ್ದ ಬಿಜೆಪಿ ನಾಯಕರು ಈಗ ಎಲ್ಲಿ ಅಡಗಿಕೊಂಡಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ದರವನ್ನು ಪದೇ ಪದೇ ಏರಿಸಲಾಗುತ್ತಿದೆ.ಇದರಿಂದ ಬಡ ಮಧ್ಯಮ ವರ್ಗದ ಜನ ಸಂಕಷ್ಟಕ್ಕೀಡಾಗಿದ್ದಾರೆ. ಪದೇ ಪದೇ ಬೆಲೆ ಏರಿಕೆ ಮಾಡುತ್ತಿದ್ದರೂ ಕೇಂದ್ರ ಎನ್.ಡಿ.ಎ. ಸರ್ಕಾರದ ವಿರುದ್ಧ ಧ್ವನಿ ಎತ್ತಲಾಗದ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸಾಧನಾ ಸಮಾವೇಶ ಕುರಿತು ಮಾತನಾಡುವುದು ಹಾಸ್ಯಾಸ್ಪದ ಎಂದರು.
ನೀಟ್ ಯುಜಿ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲಾಗದೆ, ಪ್ರಶ್ನೆಪತ್ರಿಕೆ ಸೋರಿಕೆಯಾದರೂ ಸಂಬಂಧಪಟ್ಟ ಕೇಂದ್ರ ಸಚಿವನ ರಾಜೀನಾಮೆಗೆ ಒತ್ತಾಯಿಸಲಿಲ್ಲ. 25 ಲಕ್ಷ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟ ಆಡುತ್ತಿರುವ ಕೇಂದ್ರ ಸರ್ಕಾರವನ್ನು ರಾಜ್ಯ ಬಿಜೆಪಿ ನಾಯಕರು ಪ್ರಶ್ನಿಸಲಿ ಎಂದು ಖಂಡ್ರೆ ತಾಕೀತು ಮಾಡಿದರು.
ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳಿಗೆ ರೂ. 1.25 ಕೋಟಿ ಲಕ್ಷ ವಿನಯೋಗ ಮಾಡಲಾಗಿದೆ. ಆ ಮೂಲಕ ಮಹಿಳಾ ಮತ್ತು ಬಡವರ ಸಬಲೀಕರಣ ಆಗುತ್ತಿದೆ. ಜತೆ ಜತೆಗೆ ಅಭಿವೃದ್ಧಿಯೂ ಆಗುತ್ತಿದೆ. 2028ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಆಗದು. ಹೀಗಾಗಿ ಬಿಜೆಪಿ ಮುಖಂಡರು ಏನೇನೋ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ಪ್ರತಿವರ್ಷ 2 ಕೋಟಿ ಯುವಜನರಿಗೆ ಉದ್ಯೋಗ ಕೊಡುವುದಾಗಿ ಹೇಳಿದ ಮೋದಿ ಕೊಟ್ಟರೇ?; 2023ರೊಳಗೆ ಸರ್ವರಿಗೂ ಸೂರು ಎಂದು ಬುರುಡೆ ಬಿಟ್ಟರು. 2022ರ ವೇಳೆಗೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಕೊಚ್ಚಿಕೊಂಡವರು ಏನು ಮಾಡಿದರು. ಕೋವಿಡ್ ಕಾಲದಲ್ಲಿ ಗಂಟೆ ಹೊಡಿಸಿದರು ಅಷ್ಟೇ ಎಂದು ಲೇವಡಿ ಮಾಡಿದರು.