2026-06-06 11:30:56

ಗ್ರಾಮೀಣ ಭಾಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಸಂಖ್ಯೆ ಹೆಚ್ಚಾಗಬೇಕು|Speed News Kannada

ಗ್ರಾಮೀಣ ಭಾಗದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಸಂಖ್ಯೆ ಹೆಚ್ಚಾಗಬೇಕು|Speed News Kannada

 ತುಮಕೂರು: ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನೀಗಿಸುವಲ್ಲಿ ಮೆಡಿಕಲ್ ಕಾಲೇಜುಗಳ ಪಾತ್ರ ಅಗಾಧವಾಗಿದೆ ಎಂದು ವೆಲ್ಲೂರು ಇನ್‌ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಉಪಾಧ್ಯಕ್ಷ ಡಾ.ಶೇಖರ್‌ವಿಶ್ವನಾಥನ್ ಹೇಳಿದ್ದಾರೆ.

ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ಏರ್ಪಡಿಸಿದ್ದ 7ನೇ ವರ್ಷದ ಪದವಿ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.

 ಕಳೆದ ಕೆಲವು ವರ್ಷಗಳಲ್ಲಿ ವೈದ್ಯರ ಸಂಖ್ಯೆ ಹೆಚ್ಚಾಗುತ್ತಿರುವುದು ಕೊಂಚ ಸಮಾಧಾನ ತಂದಿದ್ದರೂ, ಹಳ್ಳಿಗಾಡಿನಲ್ಲಿ ಪ್ರತಿ 11 ಸಾವಿರ ಜನರಿಗೆ ಒಬ್ಬ ವೈದ್ಯರಿದ್ದಾರೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ವೈದ್ಯರ ಸಂಖ್ಯೆ ಹೆಚ್ಚಾಗಬೇಕಿದೆ. ಆರೋಗ್ಯ ಕ್ಷೇತ್ರದಲ್ಲಿ ನುರಿತ ಮತ್ತು ವೃತ್ತಿಪರ ಸಿಬ್ಬಂದಿ ತಯಾರು ಮಾಡುವಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಪ್ರಯತ್ನ ಮಾಡಬೇಕಾದ ಅಗತ್ಯತೆ ಇದೆ.

21 ವಿಶೇಷ ವೈದ್ಯಕೀಯ ವಿಶೇಷ ಸೇವೆ- ಚಿಕಿತ್ಸೆ ಒದಗಿಸುವ ಒಂದು ಸಾವಿರ ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಶ್ರೀದೇವಿ ವೈದ್ಯಕೀಯ ಆಸ್ಪತ್ರೆ ನಗರ ಮತ್ತು ಗ್ರಾಮೀಣ ಪ್ರದೇಶದ ಆರೋಗ್ಯ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪದವಿ ಎಂದರೆ ಶಿಕ್ಷಣದ ಕೊನೆಯಲ್ಲ. ಪದವಿ ಎಂದರೆ ಅದು ನಿರಂತರ ಕಲಿಕೆಯ ತಪಸ್ಸು ವೈದ್ಯರು ಎಂದರೆ ಕೇವಲ ಮಾತ್ರೆ ಬರೆದು ಕೊಡುವುದು ಅಷ್ಟೇ ಅಲ.್ಲ ವೈದ್ಯರು ಎಂದರೆ ನಂಬಿಕೆ, ಭರವಸೆ ಮತ್ತು ರೋಗಿಗಳ ಪಾಲಿನ ದೇವರು ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು.

ಜಗತ್ತಿನ ವೈದ್ಯಕೀಯ ಕ್ಷೇತ್ರದಲ್ಲಿ ಇಂದಿಗೂ ವೃತ್ತಿಪರ ಕೊರತೆ ಕಾಡುತ್ತಿದೆ ಇದನ್ನು ತುಂಬುವಲ್ಲಿ ಶಿಕ್ಷಣ ಸಂಸ್ಥೆಗಳು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಹಳ್ಳಿಗಾಡಿನಿಂದ ಬಂದಿರುವ ಡಾ. ಎಂ.ಆರ್. ಹುಲಿನಾಯ್ಕರ್ ಅವರು ಇಂತಹ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸುವ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಜೀವನ ಅನಿರೀಕ್ಷಿತ ತಿರುವುಗಳ ಪಯಣ. ತನ್ನ ತಪ್ಪನ್ನು ತಾನೇ ಸರಿಪಡಿಸಿಕೊಳ್ಳುವವನೇ ಉತ್ತಮ ವೈದ್ಯರಾಗಬಲ್ಲ. ಹೀಗಾಗಿ ನಿಮಗೆ ಉತ್ತಮ ಅವಕಾಶಗಳಿದೆ ವೃತ್ತಿಯಲ್ಲಿ ಪರಿಣಿತಿ ಸಾಧಿಸಿದರೆ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಹೇಳಿದರು.

ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಆರ್. ಹುಲಿನಾಯ್ಕರ್ ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ವಿಶ್ವದಲ್ಲಿ ಮೂರು ಕೋಟಿ ವೈದ್ಯರ ಕೊರತೆಯಿದೆ. ಅದೇ ರೀತಿ ದೇಶದಲ್ಲಿ ಗ್ರಾಮೀಣ ಭಾಗದಲ್ಲಿ ನುರಿತ ವೈದ್ಯರ ಕೊರತೆ ಇಂದಿಗೂ ಕಾಡುತ್ತಿದೆ. ಜೀವನದಲ್ಲಿ ಒಳ್ಳೆಯ ಡಾಕ್ಟರ್ ಎಂದರೆ ಅವರಲ್ಲಿ ನಿರಂತರ ಕಲಿಕೆಯ ಮನೋಭಾವ ಇರಬೇಕು. ಹಣ ಸಂಪಾದನೆಯೇ ವೈದ್ಯ ವೃತ್ತಿಯ ಉದ್ದೇಶವಾಗಬಾರದು. ಮಾನವೀಯತೆ ಮತ್ತು ನಿಸ್ವಾರ್ಥ ಸೇವೆ ವೈದ್ಯರ ಗುರಿಯಾಗಬೇಕು.

ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ವೈದ್ಯರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಮಾಧಾನಕರ ಸಂಗತಿ. ಚಿಕಿತ್ಸೆ, ಕಾಯಿಲೆ ಪತ್ತೆಗೆ ತಂತ್ರಜ್ಞಾನ ಹೆಚ್ಚಿನ ಮಟ್ಟದಲ್ಲಿ ನೆರವಾಗುತ್ತಿದೆ. ಸಹಾಯಕ್ಕೆ ಬರುತ್ತಿದೆ. ಆದರೆ ವೈದ್ಯರು ಪ್ರೀತಿ, ಅನುಕಂಪ ಕರುಣೆಯಿಂದ ರೋಗಿಗಳನ್ನು ಉಪಚರಿಸುವುದನ್ನು ಕಲಿಯಬೇಕು. ಈ ಜವಾಬ್ದಾರಿಯನ್ನು ಅತ್ಯಂತ ನಂಬಿಕೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದರೆ ವೈದ್ಯಕೀಯ ಕ್ಷೇತ್ರದ ಗೌರವ ಹೆಚ್ಚಾಗುತ್ತದೆ ಎಂದರು.

ಎಂ.ಬಿ.ಬಿ.ಎಸ್. ಪದವಿ ವಿಭಾಗದಲ್ಲಿ ರ‍್ಯಾಂಕ್‌ಗಳಿಸಿ ಕಾಲೇಜಿಗೆ ಕೀರ್ತಿ, ಗೌರವ ತಂದ ಐಶ್ವರ್ಯ ರೆಡ್ಡೇರ್, ಅಭಿಜಿತ್ ಮಂಜುನಾಥ್ ಭಂಡಾರಿ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಒಟ್ಟು 157 ವಿದ್ಯಾರ್ಥಿಗಳಿಗೆ ಗಣ್ಯರ ಸಮುಖ್ಮದಲ್ಲಿ ಪದವಿ ಪ್ರಧಾನ ಮಾಡಲಾಯಿತು.

ಇದಕ್ಕೂ ಮುನ್ನ ಕಾಲೇಜಿನ ಮೆಡಿಕಲ್ ಡೈರೆಕ್ಟರ್ ರಮಣ್ ಹುಲಿನಾಯ್ಕರ್ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿಯ ಘನತೆ ಗೌರವ ಮತ್ತು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಕೆಲಸ ಮಾಡುವ ವೃತ್ತಿ ಬೋಧನೆಯ ಪ್ರಮಾಣವಚನ ಬೋಧಿಸಿದರು.

ವಿದ್ಯಾರ್ಥಿ- ಪೋಷಕರ ಅಭಿಮಾನದ ನುಡಿ:

ವಿದ್ಯಾರ್ಥಿ ವಿದ್ಯಾಸಾಗರ್ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಆತಂಕ ದುಗುಡ ಕಣ್ಣೀರಿನ ಹನಿಯೊಂದಿಗೆ ಆರಂಭವಾದ ಕಾಲೇಜು ಜೀವನ ನಗುವಿನ ಕಿರೀಟದೊಂದಿಗೆ ನಿರ್ಗಮನವಾಗುತ್ತಿದೆ ಎಂದು ಭಾವುಕರಾದರು. ಪೋಷಕರ ಪರವಾಗಿ ಸುಧಾ ಸುರೇಶ್ ಮಾತನಾಡಿ, ದೇವರು ಯಾರಿಗೂ ವರ, ಶಾಪ ಕೊಡುವುದಿಲ್ಲ. ಅವಕಾಶ ಕೊಡುತ್ತಾನೆ ಹೀಗಾಗಿ ಸಿಕ್ಕಿರುವ ಅವಕಾಶವನ್ನು ಸಮಾಜದ ಮತ್ತು ಜನರ ಒಳಿತಿಗೆ ಉಪಯೋಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್.ಪಾಟೀಲ್ ಶ್ರೀದೇವಿ ಚಾರಿಟಬಲ್ ಟ್ರಸ್ಟಿಗಳಾದ ಡಾ.ಲಾವಣ್ಯ, ಅಂಬಿಕಾ ಹುಲಿನಾಯ್ಕರ್, ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಲ್.ಹರೇಂದ್ರಕುಮಾರ್, ಉಪಪ್ರಾಂಶುಪಾಲ ಡಾ.ರೇಖಾಗುರುಮೂರ್ತಿ, ಡಾ.ಹೇಮಂತ್‌ರಾಜ್, ವೈದ್ಯಕೀಯ ಅಧೀಕ್ಷಕ ಡಾ.ಕೆ.ಮೋಹನ್‌ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.