ನವದೆಹಲಿ: ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಸಚಿವಾಲಯದ ಇತರ ಲೋಪಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ನಡೆಸುತ್ತಿದೆ ಈ ಪ್ರತಿಭಟನೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಮತ್ತು ಪೋಷಕರು ಸೇರಿದಂತೆ ನೂರಾರು ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೆಸರಿನ ಖಾತೆಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿರುವ ಅಭಿಜೀತ್ ದೀಪ್ಕೆ ಅವರು ಇಂದು ಭಾರತಕ್ಕೆ ಆಗಮಿಸಿದ್ದು, ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಅವರು, ನಾನು ದೆಹಲಿಗೆ ಬಂದಿದ್ದೇನೆ. ಜಂತರ್ ಮಂತರ್ ನಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ. ಪ್ರತಿಭಟನೆಯಲ್ಲಿ ಭಾಗಿಯಾಗಲು ಬಯಸುವವರು ಒಂದು ಪುಸ್ತಕ ಮತ್ತು ರಾಷ್ಟ್ರಧ್ವಜವನ್ನು ತೆಗೆದುಕೊಂಡು ಬನ್ನಿ. ಅಲ್ಲದೆ, ‘ಕರುಣೆ ಮತ್ತು ಕೃತಜ್ಞತೆಯ ಸಂಕೇತವಾಗಿ ಪೊಲೀಸ್ ಸಿಬ್ಬಂದಿಗೆ ಹೂವುಗಳನ್ನು ನೀಡಿ.. ಈ ಚಳವಳಿಯನ್ನು ಪ್ರೀತಿ ಮತ್ತು ಶಾಂತಿಯಿಂದ ಮುನ್ನಡೆಸೋಣ ಪೋಸ್ಟ್ ಮಾಡಿದ್ದಾರೆ.
ಸಿಜೆಪಿ ಬೆಂಬಲಿಗರು ಜಿರಳೆ ಮುಖವಾಡಗಳನ್ನು ಧರಿಸಿ, ಕೈಯಲ್ಲಿ ಹೂವುಗಳು, ಪುಸ್ತಕಗಳು ಹಾಗೂ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗಿಯಾಗಿದ್ದಾರೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.
"ಕಾಕ್ರೋಚ್‌ಗಳು ಬರುತ್ತಿವೆ, ಧರ್ಮೇಂದ್ರ ಪ್ರಧಾನ ಹೊರಟು ಹೋಗುತ್ತಿದ್ದಾರೆ" ಎಂಬ ಘೋಷಣೆಗಳನ್ನು ಕೂಗಲಾಯಿತು. NEET, CBSE, CUET ಹಾಗೂ SSC ಪರೀಕ್ಷೆಗಳಲ್ಲಿನ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಶಿಕ್ಷಣ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ನಗರಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಜಂತರ್ ಮಂತರ್, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ದೆಹಲಿ ಗಡಿಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಮತ್ತು ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿರುವ ಅಭಿಜೀತ್ ದಿಪ್ಕೆ ಅವರ ನಿವಾಸದ ಬಳಿಯೂ ಬಿಗಿ ಭದ್ರತೆಯನ್ನು ಹೆಕೈಗೊಳ್ಳಲಾಗಿದೆ.
ಈ ಪ್ರತಿಭಟನೆಗೆ ಹೋರಾಟಗಾರ ಸೋನಂ ವಾಂಗ್ಚುಕ್ ಸಹ ಬೆಂಬಲ ಸೂಚಿಸಿದ್ದು, ಅಭಿಜೀತ್ ದಿಪ್ಕೆ ಅವರನ್ನು ಬಂಧಿಸಿದರೆ ತಾವು ಆರು ವಾರಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.