ಬೆಂಗಳೂರು: ಒಂದು ಕಡೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಎಕ್ಸ್ ನಲ್ಲಿ ವಾಕ್ಸಮರ ನಡೆಸುತ್ತಿದ್ದರೆ ಮತ್ತೊಂದು ಕಡೆ ವಂದೇ ಮಾತರಂ ಕುರಿತು ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಬಿಜೆಪಿ ನಡೆಯನ್ನು ಶಂಕಿಸಿದ್ದಾರೆ.
ಮೇಲ್ಮನೆ ಸದಸ್ಯರೂ ಆದ ಹರಿಪ್ರಸಾದ್ ಎಕ್ಸ್ ನಲ್ಲಿ ವಂದೇ ಮಾತರಂ ಹಾಡಿಗೆ ರಾಷ್ಟ್ರಗೀತೆಯ ಸರಿಸಮಾನವಾದ ಸ್ಥಾನಮಾನ ನೀಡುವುದು ರಾಷ್ಟ್ರಗೀತೆಯ ಘನತೆ ಹಾಗೂ ಸ್ಥಾನಮಾನವನ್ನೇ ಕುಗ್ಗಿಸುವ ಅಪಾಯಕಾರಿ ಪ್ರಯತ್ನ. ರಾಷ್ಟ್ರಗೀತೆ ಜನ ಗಣ ಮನ ಕುರಿತು ಆರ್‌ಎಸ್‌ಎಸ್ ಆರಂಭದಿಂದಲೇ ಹೊಂದಿಕೊಂಡು ಬಂದಿರುವ ಅಸಮ್ಮತಿ ಹೊಸದಲ್ಲ. ಸಂಘ ಪರಿವಾರದ ಎರಡನೇ ಸರಸಂಘಚಾಲಕರಾದ ಮಾಧವ ಸದಾಶಿವ ಗೋಳ್ವಾಲ್ಕರ್ ಅವರು 1966ರಲ್ಲಿ ಪ್ರಕಟಿಸಿದ ಬಂಚ್ ಆಫ್ ಥಾಟ್ಸ್ ಕೃತಿಯಲ್ಲೇ ಈ ಭಿನ್ನಮತ ಸ್ಪಷ್ಟವಾಗಿ ದಾಖಲಾಗಿದೆ. ವಂದೇ ಮಾತರಂಗೆ ಆದ್ಯತೆ ನೀಡುವ ಆ ಮನೋಭಾವನೆ, ಆರು ದಶಕಗಳ ನಂತರ ಕೇಂದ್ರ ಸರ್ಕಾರದ ಅಧಿಕೃತ ಕ್ರಮಗಳ ಮೂಲಕ ಮತ್ತೆ ತಲೆದೋರುತ್ತಿರುವುದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಸಂವಿಧಾನ, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯವೆಂದು ಸ್ಪಷ್ಟವಾಗಿ ಹೇಳಲಾಗಿದೆ. 1950ರ ಜನವರಿ 24ರಂದು ಸಂವಿಧಾನ ಸಭೆ ಜನ ಗಣ ಮನವನ್ನು ರಾಷ್ಟ್ರಗೀತೆಯಾಗಿ ಏಕಮತದಿಂದ ಅವಿರೋಧವಾಗಿ ಅಂಗೀಕರಿಸಿತು. ಅದೇ ಸಂದರ್ಭದಲ್ಲಿ ವಂದೇ ಮಾತರಂ ಮತ್ತು ಸಾರೆ ಜಹಾನ್ ಸೆ ಅಚ್ಚಾ ಹಾಡನ್ನು ರಾಷ್ಟ್ರಗೀತೆಗಳೆಂದು ಗುರುತಿಸಲಾಗಿದೆ ಎಂದಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿವಾದವನ್ನು ಉದ್ದೇಶಪೂರ್ವಕವಾಗಿ ಉತ್ಕರ್ಷಗೊಳಿಸಲಾಗುತ್ತಿದೆಯೇ ಎಂಬ ಅನುಮಾನವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ರಾಷ್ಟ್ರಗೀತೆಯ ಬದಲಾವಣೆ ಅಥವಾ ಅದರ ಸ್ಥಾನಮಾನ ಕುಗ್ಗಿಸುವ ಪ್ರಯತ್ನಗಳು ಕೇವಲ ರಾಜಕೀಯ ತಂತ್ರವಾಗದೇ, ದೀರ್ಘಕಾಲೀನ ಸಂವಿಧಾನಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಹೊಂದಿವೆ. ರಾಷ್ಟ್ರಗೀತೆ ಕುರಿತಾಗಿ ಈಗ ನಡೆಯುತ್ತಿರುವ ಈ ಚರ್ಚೆ, ಕೇವಲ ಸಂಗೀತ ಅಥವಾ ಪದಗಳ ಪ್ರಶ್ನೆಯಲ್ಲ; ಅದು ಭಾರತೀಯ ಗಣರಾಜ್ಯದ ಆತ್ಮ ಮತ್ತು ಮೌಲ್ಯಗಳ ಕುರಿತ ಗಂಭೀರ ಪ್ರಶ್ನೆಯಾಗಿದೆ ಎಂದೂ ಹರಿಪ್ರಸಾದ್ ಶಂಕಿಸಿದ್ದಾರೆ.