2026-06-08 03:57:22

Violence flares up again in Manipur|ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ |Speed News Kannada

Violence flares up again in Manipur|ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ |Speed News Kannada

ಈಶಾನ್ಯ ರಾಜ್ಯ ಮಣಿಪುರದಲ್ಲಿ ಶಾಂತಿ ಮರೀಚಿಕೆಯಾಗಿದ್ದು, ಮತ್ತೆ ಹಿಂಸಾಚಾರದ ಕಿಚ್ಚು ಹೊತ್ತಿಕೊಂಡಿದೆ. ಉಗ್ರರ ಬಾಂಬ್ ದಾಳಿಗೆ ಇಬ್ಬರು ಮಕ್ಕಳು ಬಲಿಯಾದ ಬೆನ್ನಲ್ಲೇ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಸರ್ಕಾರ ಇಂಫಾಲ್ ಸೇರಿದಂತೆ ಐದು ಪ್ರಮುಖ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಿದೆ.ಮಣಿಪುರದ ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾಬಿ ಪ್ರದೇಶದಲ್ಲಿ ಶಂಕಿತ ಉಗ್ರರು ಮನೆಯೊಂದರ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಐದು ವರ್ಷದ ಬಾಲಕ ಮತ್ತು ಕೇವಲ ಆರು ತಿಂಗಳ ಮಗು ದುರ್ಮರಣಕ್ಕೀಡಾಗಿದ್ದು, ತಾಯಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಮಾನವೀಯ ಕೃತ್ಯದ ವಿರುದ್ಧ ಸ್ಥಳೀಯರು ರೊಚ್ಚಿಗೆದ್ದಿದ್ದಾರೆ.

 ಮಕ್ಕಳ ಸಾವಿನಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಇಂದು ಬೆಳಿಗ್ಗೆ ಎರಡು ತೈಲ ಟ್ಯಾಂಕರ್‌ಗಳು ಮತ್ತು ಒಂದು ಟ್ರಕ್‌ಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸ್ ಠಾಣೆಗಳ ಮುಂದೆ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ವದಂತಿಗಳು ಮತ್ತು ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್, ಕಾಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಮೊಬೈಲ್ ಡೇಟಾ, ಬ್ರಾಡ್‌ಬ್ಯಾಂಡ್ ಮತ್ತು ವಿಪಿಎನ್ ಸೇವೆಗಳನ್ನು ನಿಷೇಧಿಸಲಾಗಿದೆ. ಮುಖ್ಯಮಂತ್ರಿ ವೈ. ಖೇಮ್‌ಚಂದ್ ಸಿಂಗ್ ಈ ಘಟನೆಯನ್ನು ‘ಅನಾಗರಿಕ ಕೃತ್ಯ’ ಎಂದು ಕರೆದಿದ್ದು, ಹಂತಕರ ಪತ್ತೆಗೆ ಆದೇಶಿಸಿದ್ದಾರೆ.ಸದ್ಯ ಮಣಿಪುರದ ಕಣಿವೆ ಜಿಲ್ಲೆಗಳಲ್ಲಿ ಅಘೋಷಿತ ಕರ್ಫ್ಯೂ ಮಾದರಿಯ ವಾತಾವರಣ ನಿರ್ಮಾಣವಾಗಿದ್ದು, ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

 

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.