2026-06-08 06:45:28

Vijayendra accuses Siddaramaiah | ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಆರೋಪ | Speed News Kannada

Vijayendra accuses Siddaramaiah | ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಆರೋಪ | Speed News Kannada

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರವು ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪ ಮಾಡಿದ್ದಾರೆ. 
ಅವರು ಇಂದು ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 
ಭ್ರಷ್ಟಾಚಾರ ಕುರಿತು ಮಾತನಾಡಲು ಕಾಂಗ್ರೆಸ್‌ ಗೆ ನೈತಿಕತೆ ಇಲ್ಲ. ಭ್ರಷ್ಟಾಚಾರ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರಿಯಾಂಕ್ ಖರ್ಗೆ ಮಾತನಾಡುತ್ತಲೇ ಇರುತ್ತಾರೆ. 
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆಯಿತು. ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರು. ಸಿದ್ದರಾಮಯ್ಯನವರ ಸಂಪುಟದ ಸಚಿವರು ರಾಜೀನಾಮೆ ಕೊಟ್ಟರು. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ನೂರಾರು ಕೋಟಿ ಹಣವನ್ನು ತೆಲಂಗಾಣ ಚುನಾವಣೆಗೆ ಬಳಸಿದ್ದೀರಿ ಎಂದು ಟೀಕಿಸಿದರು.
ನೀವು ನಮಗೆ ಉಪದೇಶ ನೀಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತಿದೆ.  ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರವು ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿದೆ. ಬಂಜಾರ ಸಮಾಜದ ಬಗ್ಗೆ ತಾತ್ಸಾರ, ಅಲಕ್ಷ್ಯ ತೋರುವ ಇವರು ಅಹಿಂದ ಹೆಸರು ಹೇಳಿಕೊಂಡು ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು. 
ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿದೆ. ಈ ಸಮಾಜವು ಕಳೆದ 30-40 ವರ್ಷಗಳಿಂದ ಬಿಜೆಪಿ ಜೊತೆ ಗಟ್ಟಿಯಾಗಿ ಗುರುತಿಸಿಕೊಂಡಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಶೇ. 100ಕ್ಕೆ ನೂರು ಬೆಂಬಲಿಸುತ್ತಿದೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯನವರ ಸರಕಾರದಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಈ ಸಮಾಜಕ್ಕೆ ಅನ್ಯಾಯವೂ ಆಗಿದೆ. ಮತ್ತೊಂದು ಕಡೆ ಈ ಸಮಾಜ ಟಾರ್ಗೆಟ್ ಆಗುತ್ತಿದೆ ಎಂದು ವಿಶ್ಲೇಷಿಸಿದರು.
ಸೂರಗುಂಡನಕೊಪ್ಪದಲ್ಲಿ ಈಚೆಗೆ ಕಾರ್ಯಕ್ರಮ ನಡೆಯುತ್ತಿತ್ತು. ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿದ್ದ ಬಂಜಾರ ಸಮಾಜದ ಯುವಕರು ಸಹಜವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆ ಮುಂದಿಟ್ಟಿದ್ದಾರೆ. ಇದ್ಯಾವುದಕ್ಕೂ ಉತ್ತರ ಕೊಡದೇ ಶಿವಕುಮಾರ್ ಅವರು ಓಡಿಹೋಗಿದ್ದನ್ನು ನೋಡಿದ್ದೇವೆ. ಆ ಬಂಜಾರ ಸಮಾಜದ ಯುವಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದರು.
ಶಾಸಕ ಚಂದ್ರು ಲಮಾಣಿಯವರ ವಿಚಾರ ಕೋರ್ಟಿನಲ್ಲಿದ್ದು, ಅದರ ಬಗ್ಗೆ ಹೆಚ್ಚೇನೂ ಹೇಳಲು ಹೋಗುವುದಿಲ್ಲ. ಆಡಿಯೋ ಲೀಕ್ ಆಗಿದೆ. ಏನೇನು ಚರ್ಚೆ ಆಗಿದೆ? ಯಾವ ರೀತಿ ರಾಜಕೀಯವಾಗಿ ಟಾರ್ಗೆಟ್ ಆಗಿದ್ದಾರೆ; ಇವೆಲ್ಲವೂ ಬಹಿರಂಗ ಆಗಿದೆ ಎಂದು ತಿಳಿಸಿದರು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.