2026-07-06 11:15:38

VENEZUELA | ವೆನೆಜುವೆಲಾದಲ್ಲಿ ಭೂಕಂಪ ಸಾವಿನ ಸಂಖ್ಯೆ 3342ಕ್ಕೆ ಏರಿಕೆ ಆಪರೇಷನ್ ಅಮಿಸ್ಟಾಡ್ ಮೂಲಕ ಭಾರತದ ಸಹಾಯ ಹಸ್ತ! | SNK

VENEZUELA | ವೆನೆಜುವೆಲಾದಲ್ಲಿ ಭೂಕಂಪ ಸಾವಿನ ಸಂಖ್ಯೆ 3342ಕ್ಕೆ ಏರಿಕೆ ಆಪರೇಷನ್ ಅಮಿಸ್ಟಾಡ್ ಮೂಲಕ ಭಾರತದ ಸಹಾಯ ಹಸ್ತ! | SNK

ಕರಾಕಸ್: ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಅವಳಿ ಭೂಕಂಪಗಳ ದುರಂತ ದಿನದಿಂದ ದಿನಕ್ಕೆ ಹೆಚ್ಕುತ್ತಲೇ ಇದ್ದು, ಸಾವಿನ ಸಂಖ್ಯೆ ಭಾನುವಾರದ ವೇಳೆಗೆ 3,342 ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಸೆಂಬ್ಲಿ ಅಧ್ಯಕ್ಷ ಜಾರ್ಜ್ ರೊಡ್ರಿಗಸ್ ತಿಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ 16,740 ಕ್ಕೂ ಹೆಚ್ಚು ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

80 ತಾತ್ಕಾಲಿಕ ಪರಿಹಾರ ಶಿಬಿರಗಳು: ಸಾವಿರಾರು ಜನ ನಾಪತ್ತೆ ಟೆಲಿಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ರೊಡ್ರಿಗಸ್, ಈವರೆಗೆ 6,462 ಜನರನ್ನು ರಕ್ಷಿಸಲಾಗಿದ್ದು, 17,345 ಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ ಎಂದು ಹೇಳಿದ್ದಾರೆ. ಸಂತ್ರಸ್ತರಿಗಾಗಿ ಸರ್ಕಾರ 80 ತಾತ್ಕಾಲಿಕ ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ. ಜೂನ್ 24 ರಂದು ಸಂಭವಿಸಿದ 7.2 ಮತ್ತು 7.5 ತೀವ್ರತೆಯ ಪ್ರಬಲ ಭೂಕಂಪಗಳ ನಂತರ ಬರೋಬ್ಬರಿ 995 ಆಫ್ಟರ್‌ಶಾಕ್‌ಗಳು (ಲಘು ಭೂಕಂಪಗಳು) ಸಂಭವಿಸಿದ್ದು, ಇದು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಸಿದೆ. ಸದ್ಯ 3,281 ಅಂತರರಾಷ್ಟ್ರೀಯ ಸಿಬ್ಬಂದಿ ಒಳಗೊಂಡಂತೆ ಒಟ್ಟು 29,567 ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದಾರೆ. ಆದರೆ, ಹತ್ತಾರು ಸಾವಿರ ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಸಾವಿನ ಸಂಖ್ಯೆ: 3,342

ಗಾಯಗೊಂಡವರು: 16,740

ನಿರಾಶ್ರಿತರು: 17,345

ಸ್ಥಾಪಿಸಲಾದ ಶಿಬಿರಗಳು: 80

ವೆನೆಜುವೆಲಾದಲ್ಲಿ 7 ದಿನಗಳ ರಾಷ್ಟ್ರೀಯ ಶೋಕಾಚರಣೆ ದೇಶದ ಈ ಅಭೂತಪೂರ್ವ ಮಾನವೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ 7 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದಾರೆ. "ಈ ದುರಂತವು ವೆನೆಜುವೆಲಾದ ಆತ್ಮವನ್ನೇ ಸೀಳಿದೆ" ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ನಿರಂತರ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಂತ್ರಸ್ತರ ಪಾಲಿಗೆ ದೇವದೂತರಾದ ಭಾರತೀಯ ವೈದ್ಯರು!
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಭಾರತ ಸರ್ಕಾರವು ವೆನೆಜುವೆಲಾದ ಸಹಾಯಕ್ಕೆ ಧಾವಿಸಿದ್ದು, 'ಆಪರೇಷನ್ ಅಮಿಸ್ಟಾಡ್' (Operation Amistad) ಅಡಿಯಲ್ಲಿ ತನ್ನ ರಕ್ಷಣಾ ಮತ್ತು ವೈದ್ಯಕೀಯ ನೆರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಭಾರತೀಯ ಸೇನೆಯ ವೈದ್ಯಕೀಯ ತಂಡಗಳು ಸ್ಥಳದಲ್ಲೇ ಫೀಲ್ಡ್ ಆಸ್ಪತ್ರೆಗಳನ್ನು ತೆರೆದು ಭೂಕಂಪದಿಂದ ಬದುಕುಳಿದವರಿಗೆ ನಿರಂತರ ತುರ್ತು ಚಿಕಿತ್ಸೆ ನೀಡುತ್ತಿವೆ. ಭಾರತೀಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನೀಡುತ್ತಿರುವ ಕಾಳಜಿ ಹಾಗೂ ಚಿಕಿತ್ಸೆಗೆ ವೆನೆಜುವೆಲಾ ನಾಗರಿಕರು ಕೈಮುಗಿದು ಧನ್ಯವಾದ ಅರ್ಪಿಸುತ್ತಿರುವ ವೀಡಿಯೊಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಂಚಿಕೊಂಡಿದೆ. ಭೀಕರ ಭೂಕಂಪದ ಬೆನ್ನಲ್ಲೇ ಭಾರತ ಈ ಮಾನವೀಯ ಕಾರ್ಯಾಚರಣೆಯನ್ನು ಆರಂಭಿಸಿತ್ತು.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.