ರಾಜ್ಯದ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದಕ್ಕೆ ಮತ್ತು ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ರಾತ್ರಿ ವೇಳೆ ಹೆಡ್‌ಲೈಟ್ ಇಲ್ಲದೆ, ಕೇವಲ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಸಂಚರಿಸಿರುವ ಘಟನೆ ತೀವ್ರ ಆತಂಕ ಮೂಡಿಸಿದೆ. ಬಸ್‌ಗಳ ಮೂಲಭೂತ ನಿರ್ವಹಣೆಗೂ ಹಣವಿಲ್ಲದಂತಹ ದುಸ್ಥಿತಿಗೆ ಸಾರಿಗೆ ಸಂಸ್ಥೆಗಳನ್ನು ತಳ್ಳಿರುವ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ನಾಯಕ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಒಂದೆಡೆ ಇರುವ ಬಸ್‌ಗಳನ್ನು ದುರಸ್ತಿ ಮಾಡಲು ಸಾಧ್ಯವಾಗದ ಸರ್ಕಾರ, ಮತ್ತೊಂದೆಡೆ ಕೇಂದ್ರ ಸರ್ಕಾರ ಉಚಿತವಾಗಿ ನೀಡುತ್ತಿರುವ ಹೊಸ ಬಸ್‌ಗಳನ್ನು ರಸ್ತೆಗೆ ಇಳಿಸಲಾಗದಷ್ಟು ನಿಷ್ಕ್ರಿಯವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಕೇಂದ್ರದ ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ಇ-ಡ್ರೈವ್ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ಬರೋಬ್ಬರಿ 4,500 ಪರಿಸರ ಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳನ್ನು ಮಂಜೂರು ಮಾಡಿದ್ದಾರೆ. ಕಳೆದ 2025ರ ಡಿಸೆಂಬರ್‌ನಲ್ಲೇ ಈ ಕುರಿತು ಅಧಿಕೃತ ಒಪ್ಪಿಗೆ ಸಿಕ್ಕಿದ್ದರೂ, ಕರ್ನಾಟಕ ಸಾರಿಗೆ ಇಲಾಖೆ ಇದುವರೆಗೆ ಕನಿಷ್ಠ 'ಲೆಟರ್ ಆಫ್ ಅವಾರ್ಡ್' (LoA) ನೀಡುವ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿಲ್ಲ. ರಾಜ್ಯ ಸರ್ಕಾರದ ಈ ಬೇಜವಾಬ್ದಾರಿತನದಿಂದಾಗಿ ಸಾರ್ವಜನಿಕ ಸೇವೆಗೆ ಸಿಗಬೇಕಾಗಿದ್ದ ಸಾವಿರಾರು ಹೊಸ ಬಸ್‌ಗಳ ನಿಯೋಜನೆ ನನೆಗುದಿಗೆ ಬಿದ್ದಿದೆ.
ರಾಜ್ಯ ಸರ್ಕಾರದ ಉಚಿತ ಪ್ರಯಾಣದ 'ಶಕ್ತಿ' ಯೋಜನೆಗೆ ಸಂಬಂಧಿಸಿದಂತೆ ಸಾರಿಗೆ ಸಂಸ್ಥೆಗಳಿಗೆ ಬರಬೇಕಾದ 4,573 ಕೋಟಿ ರೂಪಾಯಿ ಬಾಕಿ ಮೊತ್ತವನ್ನು ಸರ್ಕಾರ ಇನ್ನು ಮುರಿದುಕೊಟ್ಟಿಲ್ಲ. ಈ ಹಣಕಾಸಿನ ಮುಗ್ಗಟ್ಟಿನಿಂದಾಗಿ ಪ್ರಸ್ತುತ ಸಂಚರಿಸುತ್ತಿರುವ ಸರ್ಕಾರಿ ಬಸ್‌ಗಳು ಕನಿಷ್ಠ ದುರಸ್ತಿ ಮತ್ತು ಕಳಪೆ ನಿರ್ವಹಣೆಯಿಂದ ಸೊರಗುತ್ತಿವೆ. ಕೇಂದ್ರ ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಉಚಿತವಾಗಿ ಒದಗಿಸುತ್ತಿರುವ 4,500 ಹೊಸ ಇ-ಬಸ್‌ಗಳನ್ನು ಬಳಸಿಕೊಳ್ಳಲು ಯೋಗ್ಯತೆಯಿಲ್ಲದ ಕಾಂಗ್ರೆಸ್ ಸರ್ಕಾರ, ಕೇವಲ ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ಮೊಂಡುತನದಿಂದ ಇಡೀ ಸಾರಿಗೆ ವ್ಯವಸ್ಥೆಯನ್ನು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುವ ಸ್ಥಿತಿಗೆ ತಂದಿಟ್ಟಿದೆ ಎಂದು ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ