2026-07-06 11:20:01

AYODHYA | ಶಿಕ್ಷಕ ಮಾಜಿ ಮೆಕ್ಯಾನಿಕ್ ರಾಮ ಮಂದಿರ ದೇಣಿಗೆ ಹಗರಣದಲ್ಲಿ ಬಂಧಿತರಾದ 8 ಮಂದಿಯ ಹಿನ್ನೆಲೆ ಇದು | SNK

AYODHYA | ಶಿಕ್ಷಕ ಮಾಜಿ ಮೆಕ್ಯಾನಿಕ್ ರಾಮ ಮಂದಿರ ದೇಣಿಗೆ ಹಗರಣದಲ್ಲಿ ಬಂಧಿತರಾದ 8 ಮಂದಿಯ ಹಿನ್ನೆಲೆ ಇದು | SNK

ಲಕ್ನೋ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಈ ಎಂಟು ಮಂದಿ ವಿಭಿನ್ನ ಹಿನ್ನೆಲೆಯವರಾಗಿದ್ದು, ಇವರು, ವ್ಯವಸ್ಥೆಯಲ್ಲಿದ್ದ ಲೋಪದೋಷಗಳನ್ನು ಬಳಸಿಕೊಂಡು ಹಣ ಲೂಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರ ಪೈಕಿ ಪ್ರಾಥಮಿಕ ಶಾಲಾ ಶಿಕ್ಷಕ, ನಿವೃತ್ತ ಬ್ಯಾಂಕ್ ಉದ್ಯೋಗಿ, ವಾಹನ ಮೆಕ್ಯಾನಿಕ್ ಹಾಗೂ ರಾಮಮಂದಿರ ಟ್ರಸ್ಟ್‌ನ ಪ್ರಮುಖ ಪದಾಧಿಕಾರಿಯೊಬ್ಬರ ಆಪ್ತ ಸಹಾಯಕ ಸೇರಿದ್ದಾರೆ. ದೇವಾಲಯದ ದೇಣಿಗೆ ಎಣಿಕೆ ವಿಭಾಗದಲ್ಲಿ ಇವರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಈ ಇಡೀ ಹಗರಣದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ಅವಿನಾಶ್ ಶುಕ್ಲಾ ಎಂಬಾತನೇ ಪ್ರಮುಖ ಸೂತ್ರಧಾರ ಎಂದು ಹೇಳಲಾಗಿದೆ. ಈತನಿಗೆ ಸಂಬಂಧಿಸಿದ ಜಾಗಗಳ ಮೇಲೆ ದಾಳಿ ನಡೆಸಿದಾಗ ಸುಮಾರು 20 ಲಕ್ಷ ರೂಪಾಯಿಗೂ ಅಧಿಕ ನಗದು, ವಿದೇಶಿ ಕರೆನ್ಸಿ ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಕಣ್ಣು ಬೀಳದ ಜಾಗಗಳನ್ನು ಗುರುತಿಸಿ, ಅಲ್ಲಿ ಹಣವನ್ನು ಅಡಗಿಸಿಟ್ಟು ನಂತರ ಶೌಚಾಲಯಗಳ ಮೂಲಕ ಹೊರಗೆ ಸಾಗಿಸುತ್ತಿದ್ದದ್ದಾಗಿ ವಿಚಾರಣೆ ವೇಳೆ ಆತ ಒಪ್ಪಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಅನುಕಲ್ಪ್ ಮಿಶ್ರಾ ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದರೂ, ಆತನ ಹೆಸರಿನಲ್ಲಿ 65 ಲಕ್ಷ ರೂಪಾಯಿ ಮೌಲ್ಯದ ಮನೆ, ತೋಟದ ಮನೆ ಹಾಗೂ ಐಷಾರಾಮಿ ವಾಹನಗಳಿರುವುದು ಪತ್ತೆಯಾಗಿದೆ.

ಬಂಧಿತರಲ್ಲಿ ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್ ಎಂಬಾತ ಪ್ರಮುಖನಾಗಿದ್ದಾನೆ. ಈತ ಮೊದಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಕಾರು ಚಾಲಕನಾಗಿದ್ದನು. ನಂತರದ ದಿನಗಳಲ್ಲಿ ನಂಬಿಕೆ ಗಳಿಸಿ ದೇವಾಲಯದ ಆಡಳಿತ ಮತ್ತು ಗಣ್ಯರ ಭೇಟಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದನು. ಈತನಿಗೆ ದೇಣಿಗೆ ಎಣಿಕೆ ಕೊಠಡಿ ಮತ್ತು ಹುಂಡಿಗಳ ಕೀಲಿ ಕೈಗಳನ್ನು ಬಳಸುವ ಅನಧಿಕೃತ ಅವಕಾಶವಿತ್ತು ಎನ್ನಲಾಗಿದೆ. ಉಳಿದಂತೆ ಮಾಜಿ ಮೆಕ್ಯಾನಿಕ್ ಲವಕುಶ್ ಮಿಶ್ರಾ, ನಗದು ಎಣಿಕೆ ತಂಡದಲ್ಲಿದ್ದ ರಾಮಶಂಕರ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ ಮತ್ತು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನಿವೃತ್ತ ಬ್ಯಾಂಕ್ ನೌಕರ ಸುಭಾಷ್ ಚಂದ್ರ ಶ್ರೀವಾಸ್ತವ ಅವರನ್ನೂ ಬಂಧಿಸಲಾಗಿದ್ದು, ಇವರಿಂದಲೂ ಲಕ್ಷಾಂತರ ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ವಿಶೇಷ ತನಿಖಾ ತಂಡ (SIT) ನೀಡಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಜೂನ್ 25 ರಂದು ಎಫ್‌ಐಆರ್ ದಾಖಲಿಸಲಾಗಿತ್ತು. ಇದೀಗ ಆರೋಪಿಗಳ ಬ್ಯಾಂಕ್ ಖಾತೆಗಳು, ಮೊಬೈಲ್ ಚಾಟ್‌ಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಈ ದೊಡ್ಡ ಮಟ್ಟದ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ, ದೇಣಿಗೆ ವ್ಯವಸ್ಥೆಯ ಭದ್ರತೆಯನ್ನು ಪರಿಶೀಲಿಸಲು ಮತ್ತು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲು ರಾಮಮಂದಿರ ಟ್ರಸ್ಟ್ ತುರ್ತು ಸಭೆಯನ್ನು ಕರೆದಿದೆ.

Share:



Author:

...

ಪ್ರತಿ ಕ್ಷಣದ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದ ಸುದ್ದಿಗಳ ಸರಳ ನಿರೂಪಣೆ. ನೇರ, ನಿಷ್ಠುರ, ಸ್ಪಷ್ಟ ಮತ್ತು ನೈಜ ಸುದ್ದಿಗಳನ್ನುಒದಗಿಸುವುದರ ಜೊತೆಗೆ ಜಗತ್ತಿನಾದ್ಯಂತ ನಡೆಯುವ ವಿದ್ಯಮಾನಗಳ ಸಾಧಕ-ಬಾಧಕಗಳ ಕುರಿತು ಮಾಹಿತಿಗಳನ್ನು ಸಮಗ್ರವಾಗಿ ಒದಗಿಸುವ ಗುರಿಯನ್ನು ಕಳೆದ 10 ವರ್ಷಗಳಿಂದ ಸ್ಪೀಡ್‌ ನ್ಯೂಸ್‌ ಕನ್ನಡ ಹೊಂದಿದೆ.